Breaking News

ಗೃಹಲಕ್ಷ್ಮೀ ಏಪ್ರಿಲ್ ತಿಂಗಳ ಹಣ ಇಷ್ಟರಲ್ಲೇ ಜಮೆ

Spread the love

ಬೆಳಗಾವಿ: ಗೃಹ ಲಕ್ಷ್ಮಿ ಯೋಜನೆಯ 19 ಕಂತು ಈಗಾಗಲೆ ಹಾಕಲಾಗಿದೆ. ಶೀಘ್ರವೇ 20ನೇ ಕಂತನ್ನೂ ಹಾಕುತ್ತೇವೆ. ಮಾರ್ಚ್ ತಿಂಗಳದ್ದು ಸ್ವಲ್ಪ ತಾಂತ್ರಿಕ ಸಮಸ್ಯೆಯಾಗಿದೆ, ಏಪ್ರಿಲ್ ಹಣ ಇಷ್ಟರಲ್ಲೇ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಜೀವನದಲ್ಲಿ ಒಳ್ಳೆಯದಾಗಲಿ, ಜನರಿಗೆ ಅನುಕೂಲವಾಗಲಿ ಎನ್ನುವ ನೀತಿ, ಸಿದ್ದಾಂತದಿಂದ ಆಡಳಿತ ನಡೆಸುತ್ತಿದೆ. ನಾವು ಚುನಾವಣೆಗೆ ಮುನ್ನ ನೀಡಿದ ಎಲ್ಲ ವಾಗ್ದಾನಗಳನ್ನೂ ಈಡೇರಿಸಿದ್ದೇವೆ. ಹಾಗಾಗಿ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ, ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎನ್ನುವ ಭರವಸೆ ಇದೆ ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವುದು ನಮ್ಮ ತತ್ತ್ವ: ನಾವು ಅಧಿಕಾರಕ್ಕೆ ಬಂದ ತಕ್ಷಣ ಸಂವಿಧಾನ ಪೀಠ ಓದು ಜಾರಿಗೆ ತಂದಿದ್ದೇವೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವುದು ನಮ್ಮ ತತ್ತ್ವ . ಮಹಿಳೆಯರ ಸಬಲೀಕರಣ ಗುರಿ ಇಟ್ಟುಕೊಂಡು ಹಲವಾರು ಯೋಜನೆ ತಂದಿದ್ದೇವೆ. ಈ ದಿಸೆಯಲ್ಲಿ ದೃಢ ಹೆಜ್ಜೆ ಇಟ್ಟಿದ್ದೇವೆ ಎಂದರು.

ಸಂಪುಟ ವಿಸ್ತರಣೆ, ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ. ಅವರು ಎಲ್ಲ ಶಾಸಕರ ಅಭಿಪ್ರಾಯ ಪಡೆದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಹೈಕಮಾಂಡ್ ತೀರ್ಮಾನಕ್ಕೆ ಬದ್ಧಳಾಗಿ ನಡೆದುಕೊಳ್ಳುವವಳು, ಶಿಸ್ತು ಪಾಲಿಸುವವಳು. ಈ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಸ್ಪಷ್ಟಪಡಿಸಿದರು.

ಹಿಡಕಲ್ ಜಲಾಶಯದಿಂದ ನೀರು ಯಾರು ಒಯ್ಯುತ್ತಿದ್ದಾರೆ? ಏಕೆ ಒಯ್ಯುತ್ತಿದ್ದಾರೆ? ನನಗೆ ಗೊತ್ತಿಲ್ಲ: ಹಿಡಕಲ್ ಜಲಾಶಯದಿಂದ ಧಾರವಾಡದ ಕೈಗಾರಿಕೆ ಪ್ರದೇಶಕ್ಕೆ ನೀರು ಒಯ್ಯುವ ಯೋಜನೆಗೂ ತಮ್ಮ ಮೃಣಾಲ ಶುಗರ್ಸ್​​​​ಗೂ ಯಾವುದೇ ಸಂಬಂಧವಿಲ್ಲ. ಬೆಳಗಾವಿಗೆ ಏನೇ ಕೆಟ್ಟದಾದರೂ ನನ್ನ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಹಿಡಕಲ್ ಜಲಾಶಯದಿಂದ ನೀರು ಯಾರು ಒಯ್ಯುತ್ತಿದ್ದಾರೆ? ಏಕೆ ಒಯ್ಯುತ್ತಿದ್ದಾರೆ? ನನಗೆ ಗೊತ್ತಿಲ್ಲ. ಇದಕ್ಕೆ ನಮ್ಮ ಹೆಸರನ್ನು ತಳುಕು ಹಾಕುವುದನ್ನು ಕೇಳಿ ನನಗೆ ಆಶ್ಚರ್ಯ ಮತ್ತು ಅನುಮಾನ ಹುಟ್ಟಿದೆ. ನಮ್ಮ ಶುಗರ್ ಫ್ಯಾಕ್ಟರಿಗೆ ಈ ನೀರು ಅಗತ್ಯವೂ ಇಲ್ಲ, ಅದಕ್ಕೆ ಸಂಬಂಧವೂ ಇಲ್ಲ. ನಮಗೆ ಹತ್ತಿರದಲ್ಲಿ ಹಳ್ಳವಿದೆ, ಬೇಕಾದಷ್ಟು ಕೊಳವೆ ಬಾವಿಗಳನ್ನೂ ತೋಡಿಸಿದ್ದೇವೆ. ಅಲ್ಲಿ ಸಾಕಷ್ಟು ನೀರು ಬಂದಿದೆ. ನಮಗೆ ಬೇರೆ ನೀರು ಬೇಕಾಗಿಲ್ಲ. ಈ ಯೋಜನೆ ಯಾವಾಗ ಜಾರಿಗೆ ಬಂದಿದೆ, ಯಾರು ರೂಪಿಸಿದ್ದಾರೆ ಎನ್ನುವುೂ ನನಗೆ ಗೊತ್ತಿಲ್ಲ. ನನಗಂತೂ ಸಂಬಂಧವೇ ಇಲ್ಲ ಎಂದು ಅವರು ವಿವರಿಸಿದರು.
ಬೆಳಗಾವಿ ಜನರ ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ: ಬೆಳಗಾವಿ ಜನರ ಭಾವನೆಗಳಿಗೆ ವಿರುದ್ಧವಾಗಿ ನಾನು ಯಾವತ್ತೂ ನಡೆದುಕೊಳ್ಳುವುದಿಲ್ಲ. ಹಿಡಕಲ್ ಜಲಾಶಯದ ನೀರನ್ನು ಧಾರವಾಡಕ್ಕೆ ಒಯ್ಯುವ ಯೋಜನೆ ಸಚಿವಸಂಪುಟದ ಮುಂದೆ ಬಂದೂ ಇಲ್ಲ. ಇದು ಯಾವ ಕಾಲದಲ್ಲಿ ಮಂಜೂರಾಗಿದೆ ಎನ್ನುವುದೂ ಗೊತ್ತಿಲ್ಲ. ನಾವಂತೂ ಒಪ್ಪಿಗೆ ಕೊಟ್ಟಿಲ್ಲ. ಈ ಬಗ್ಗೆ ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಯನ್ನೂ ಕೊಟ್ಟಿದ್ದಾರೆ. ನಾನು ಅವರೊಂದಿಗೆ ಚರ್ಚಿಸಿ, ಸೂಕ್ತವಾಗಿ ಸ್ಪಂದಿಸುತ್ತೇನೆ ಎಂದು ಹೆಬ್ಬಾಳಕರ್ ತಿಳಿಸಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ