ನೆಲಮಂಗಲ : ಹೊಲದಲ್ಲಿ ಹಸು ಮೇಯಿಸುತ್ತಿದ್ದ ವೃದ್ಧೆಯ ಬಳಿ ಬಂದ ಐನಾತಿಯೋರ್ವ, ಮಗುವಿಗೆ ಹಸುವಿನ ತುಪ್ಪ ಬೇಕೆಂದು ಮಾತನಾಡಿಸುವ ನೆಪದಲ್ಲಿ ಚಾಕುವಿನಿಂದ ಹಲ್ಲೆ ನಡೆಸಿ ವೃದ್ಧೆಯ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಹಿಂದಿನ ದಿನ ಇದೇ ಸರಗಳ್ಳ ಮತ್ತೊಬ್ಬ ವೃದ್ಧೆಗೆ ಚಾಕು ತೋರಿಸಿ ಹೆದರಿಸಿ ಚಿನ್ನದ ಸರವ ಕಿತ್ಕೊಂಡ್ ಪರಾರಿಯಾಗಿದ್ದು, ಇಂದು ಪೊಲೀಸರ ಅತಿಥಿಯಾಗಿದ್ದಾನೆ.
ತ್ಯಾಮಗೊಂಡ್ಲು ಮತ್ತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಮೂರು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನನ್ನು ತ್ಯಾಮಗೊಂಡ್ಲು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ತುಮಕೂರು ಮೂಲದ ಹೊನ್ನುಡಿಕೆ ಬಳಿಯ ವಿಜಯ್ (38) ಎಂದು ಗುರುತಿಸಲಾಗಿದೆ.
ಆರೋಪಿಯು ಒಂಟಿ ಮಹಿಳೆಯರು ಮತ್ತು ವೃದ್ಧೆಯರನ್ನು ಟಾರ್ಗೆಟ್ ಮಾಡುತ್ತಿದ್ದ, ಮಾತನಾಡಿಸುವ ನೆಪದಲ್ಲಿ ಮಹಿಳೆಯರ ಬಳಿ ಹೋಗುತ್ತಿದ್ದ ಈತ ಚಾಕು ತೋರಿಸಿ ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಿದ್ದ. ತ್ಯಾಮಗೊಂಡ್ಲು ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ರಂಜನ ಕುಮಾರ್ ನೇತೃತ್ವದ ಕ್ರೈಂನ ವಿಶೇಷ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತನಿಂದ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರಗಳು ಹಾಗೂ ಕೃತ್ಯಕ್ಕೆ ಬಳಸಿದ 1 ಓಲಾ ಬೈಕ್ ಮತ್ತು ಆಯುಧವನ್ನು ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೇ 20 ರಂದು ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಲ್ಲಿನಕೋಟೆ ಬಳಿ ಹೊಸಹಳ್ಳಿ ಗ್ರಾಮದ ನಿವಾಸಿ ರಂಗಮ್ಮ (60) ಎಂಬುವರಿಗೆ ಚಾಕು ತೋರಿಸಿ ಚಿನ್ನದ ಗುಂಡಿನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಮತ್ತೆ ಮೇ 21 ರಂದು ತ್ಯಾಮಗೊಂಡ್ಲು ಬಳಿ ಹಸುಗಳನ್ನ ಮೇಯಿಸ್ತಿದ್ದ ನೀರುಬಾವಿತೋಟ ಗ್ರಾಮದ ಲಕ್ಷ್ಮಮ್ಮ ಎಂಬುವರ ಮಾಂಗಲ್ಯಸರ ಎಗರಿಸಿ ಅದೇ ದಿನ ಕಾರೇಹಳ್ಳಿ ಬಳಿ ಮುತ್ತಮ್ಮ ಎಂಬುವರ ಮಾಂಗಲ್ಯಸರ ಕಸಿದು ಸರಣಿ ಸರಗಳ್ಳತನ ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7