Breaking News

ಪರಿಸರ ರಕ್ಷಣೆಗೆ ಪಣ: ತುಮಕೂರು ಪರಿಸರ ಪ್ರೇಮಿಯ ಸೈಕಲ್ ಯಾತ್ರೆ –

Spread the love

ಬೆಳಗಾವಿ: ಪರಿಸರ ರಕ್ಷಣೆ, ಪ್ರಕೃತಿಯನ್ನು ಉಳಿಸಲು ಇಲ್ಲೊಬ್ಬ ಯುವ ಪರಿಸರ ಪ್ರೇಮಿ ಪಣ ತೊಟ್ಟಿದ್ದಾರೆ. ರಾಜ್ಯಾದ್ಯಂತ ಸೈಕಲ್ ಏರಿ ಪರಿಸರ ಯಾತ್ರೆ ಮಾಡುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ತಾವಾಯ್ತು, ತಮ್ಮ ಕುಟುಂಬ ಆಯ್ತು ಅಂತಾ ಇರುವ ಜನರ ಮಧ್ಯ ಇಲ್ಲೊಬ್ಬ ಯುವಕ ಪರಿಸರಕ್ಕಾಗಿ ರಾಜ್ಯ ಸುತ್ತುತ್ತಿದ್ದಾರೆ. ಹೀಗೆ ಸೈಕಲ್ ಸವಾರಿ ಮಾಡುತ್ತಿರುವ ಯುವಕನೇ ಪರಿಸರ ಪ್ರೇಮಿ ಮಹಾಲಿಂಗ. ಮೂಲತಃ ತುಮಕೂರಿನವರು. ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಅರಣ್ಯ ಬೆಳೆಸುವ ಬಗ್ಗೆ ಆಯಾ ಜಿಲ್ಲಾಡಳಿತದ ಗಮನ ಸೆಳೆಯಲು ಈ ರೀತಿ ವಿನೂತನ ಯಾನ ಆರಂಭಿಸಿದ್ದಾರೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸುತ್ತಿದ್ದಾರೆ. ಬೆಳಗಾವಿಗೆ ಆಗಮಿಸಿದ್ದ ವೇಳೆ ತಮ್ಮ ಪರಿಸರ ಪ್ರೇಮವನ್ನು ಈಟಿವಿ ಭಾರತ ಜೊತೆಗೆ ಮನಬಿಚ್ಚಿ ಮಾತನಾಡಿದರು.

“ತುಮಕೂರು ಜಿಲ್ಲಾ ಕೇಂದ್ರದಿಂದ ಯಾತ್ರೆ ಆರಂಭಿಸಿದ್ದೇನೆ. ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮೂಲಕ ಈಗ ಬೆಳಗಾವಿಗೆ ಆಗಮಿಸಿದ್ದೇನೆ. ಪ್ರತಿ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5-10 ಎಕರೆ ಪ್ರದೇಶದಲ್ಲಿ ಕಿರು ಅರಣ್ಯ ಮತ್ತು ಪಕ್ಷಿಧಾಮ ನಿರ್ಮಿಸಿ ಅಭಿವೃದ್ಧಿ ಪಡಿಸುವಂತೆ ಮನವಿ ಸಲ್ಲಿಸುತ್ತಿದ್ದೇನೆ. ಜಿಲ್ಲಾಧಿಕಾರಿಗಳು ನಿಮ್ಮ ಅಭಿಯಾನಕ್ಕೆ ನಾವು ಕೈ ಜೋಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ” ಎಂದರು.

ಪರಿಸರ ರಕ್ಷಣೆ ಜಾಗೃತಿ ಜೊತೆಗೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ಸರ್ಕಾರಿ ಶಾಲೆ ಉಳಿಸಿ, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವಂತೆಯೂ ಮಹಾಲಿಂಗ ಅವರು ಅರಿವು ಮೂಡಿಸುತ್ತಿರುವುದು ಗಮನ ಸೆಳೆಯುತ್ತಿದೆ.

ದಿನಕ್ಕೆ 70 ಕಿ‌.ಮೀ. ಸೈಕಲ್ ತುಳಿಯುತ್ತಿದ್ದೆ. ಆದರೆ, ಬಿಸಿಲು ಬಹಳ‌ ಇರೋದರಿಂದ 50 ಕಿ.ಮೀ. ಕ್ರಮಿಸುತ್ತಿದ್ದೇನೆ. ರಾತ್ರಿ ಹೊತ್ತು ಪೆಟ್ರೋಲ್ ಪಂಪ್, ಶಾಲೆ, ದೇವಾಲಯಗಳಲ್ಲಿ ವಸತಿ ಮಾಡುತ್ತೇನೆ. ಒಂದಿಷ್ಟು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಪ್ರವಾಸಿ ಮಂದಿರದಲ್ಲಿ ವ್ಯವಸ್ಥೆ ಕಲ್ಪಿಸುತ್ತಾರೆ. ಜನರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೀರು, ಜ್ಯೂಸ್ ಕೊಟ್ಟು, ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಮಗಂತೂ ಮಾಡಲು ಆಗುವುದಿಲ್ಲ. ನೀವು ಮಾಡುತ್ತಿದ್ದೀರಿ ಎನ್ನುತ್ತಿದ್ದಾರೆ” ಎಂದು ಮಹಾಲಿಂಗ ಹರ್ಷ ವ್ಯಕ್ತಪಡಿಸಿದರು.

“ಲಕ್ಷ ಲಕ್ಷ ಫೀಸ್ ಕಟ್ಟಿ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಸೇರಿಸಬಹುದು. ಹಣ, ಆಸ್ತಿ, ಅಂತಸ್ತು ಸೇರಿ ಎಲ್ಲವನ್ನು ಮಾಡಬಹುದು. ಆದರೆ, ಆಯಸ್ಸು ಮತ್ತು ಆರೋಗ್ಯವನ್ನು ಯಾರ ಕೈಯಿಂದಲೂ ಕೊಡಲು ಸಾಧ್ಯವಿಲ್ಲ. ಅದು ಸಾಧ್ಯ ಇರುವುದು ಪರಿಸರ ಮತ್ತು ಪ್ರಕೃತಿಯಿಂದ ಮಾತ್ರ ಸಾಧ್ಯ. ಇದನ್ನು ನಾವು ಮರೆಯಬಾರದು” ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿ ವಿಜಯ್​ ಕೋಲಕಾರ ಮಾತನಾಡಿ, “ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾವು ಅದನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಅಭಿವೃದ್ಧಿ ಮತ್ತು ನಗರೀಕರಣ ಹೆಸರಿನಲ್ಲಿ ಸಾಕಷ್ಟು ಮರಗಳ ಮಾರಣಹೋಮ ಮಾಡಲಾಗುತ್ತಿದೆ. ಆ ನಿಟ್ಟಿನಲ್ಲಿ ಪರಿಸರ ರಕ್ಷಣೆ ಜಾಗೃತಿಗೆ ಕಂಕಣ ತೊಟ್ಟಿರುವ ತುಮಕೂರಿನ ಮಹಾಲಿಂಗ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಕಾರ್ಯದಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ” ಎಂದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ