ಬೆಂಗಳೂರು: ನಮ್ಮದೇ ಗಾಡಿ (ಕಾಂಗ್ರೆಸ್ ಪಕ್ಷ ) ಫುಲ್ ಇದೆ. ಇನ್ನು ಜೆಡಿಎಸ್ 14 ಶಾಸರನ್ನು ತೆಗೆದುಕೊಂಡು ನಾವೇನು ಮಾಡೋಣ. ಓವರ್ ಲೋಡೆಡ್ ಇದ್ರೂ ಕಾಂಗ್ರೆಸ್ ಪಕ್ಷದಲ್ಲೇ ಕಾಯುತ್ತೇನೆ. ಇಲ್ಲಿಯೇ ಅಧ್ಯಕ್ಷ ಆಗಬೇಕು, ಇಲ್ಲಿಯೇ ಸಿಎಂ ಆಗಬೇಕು. ನಾನು ವೇಯ್ಟಿಂಗ್ ಲಿಸ್ಟ್ನಲ್ಲಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಸದ್ಯಕ್ಕೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ಸರದಿ ಏನಿದ್ದರೂ 2028ಕ್ಕೆ. ಮೆಜೆಸ್ಟಿಕ್‌ನ ಟ್ರಾಫಿಕ್ ಜಾಮ್‌ನಲ್ಲಿ ನಮಗೆ ಅವಕಾಶ ಸಿಕ್ಕರೂ ಸಿಗಬಹುದು ಎಂದು ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಉತ್ತರಿಸಿದರು.
ಹೆಚ್ಡಿಕೆ ಸಹಕಾರದ ಪ್ರಶ್ನೆ ಉದ್ಭವಿಸುವುದಿಲ್ಲ: ಇಲ್ಲಿ ಶಿಂಧೆ, ಪವಾರ್ ಯಾರೂ ಇಲ್ಲ. ಆ ಸಾಮರ್ಥ್ಯ ಯಾರಿಗೂ ಇಲ್ಲ. ನಮ್ಮ ಪಕ್ಷದಲ್ಲೇ 140 ಶಾಸಕರಿದ್ದಾರೆ. ಜೆಡಿಎಸ್‌ನ ಕುಮಾರಸ್ವಾಮಿಯವರ ಸಹಕಾರದ ಪ್ರಶ್ನೆ ಉದ್ಭವಿಸುವುದಿಲ್ಲ. ಕುಮಾರಸ್ವಾಮಿ, ಸೋಮಣ್ಣ ಅವರಂತೆ ಪ್ರಲ್ಹಾದ್ ಜೋಶಿ ಅವರನ್ನೂ ಭೇಟಿ ಮಾಡಿದ್ದೇನೆ. ಬೆಳಗಾವಿ ವಿಮಾನ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿದೆ. ಅವುಗಳನ್ನು ಚುರುಕುಗೊಳಿಸುವ ಸಲುವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಪ್ರಸ್ತಾಪವಿಲ್ಲ. ಕೇವಲ ಅಭಿವೃದ್ಧಿ ವಿಚಾರಗಳಷ್ಟೇ ಚರ್ಚೆಯಾಗಿವೆ. ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ವಿ.ಸೋಮಣ್ಣ ಸೇರಿದಂತೆ ಕೇಂದ್ರ ಸಚಿವರ ಭೇಟಿ ಪೂರ್ವ ನಿಗದಿಯಾಗಿತ್ತು. ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡರ ಭೇಟಿ ಆಕಸ್ಮಿಕ. ಸಂಸತ್‌ಗೆ ತೆರಳುವ ಮಾರ್ಗದಲ್ಲಿ ಅವರ ಕಚೇರಿಯಿದ್ದು, ಅವರನ್ನು ಕಂಡಾಗ ಹಳೇ ಸಂಬಂಧ. ಹಾಗಾಗಿ, ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಅವರು ಹಾಸನ ರಸ್ತೆ, ಶಿರಾಡಿಘಾಟ್ ರಸ್ತೆ ಬಗ್ಗೆ ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿ ಮಾಡಲು ತೆರಳುತ್ತಿದ್ದರು. ರಸ್ತೆ ಬಗ್ಗೆ ನಾನು ಗೌಡರ ಜೊತೆ ಚರ್ಚೆ ನಡೆಸಿದೆ ಎಂದು ಹೇಳಿದರು.
ರಾಜಕೀಯದ ದೂರುಗಳನ್ನು ನೀಡುವ ಅಗತ್ಯ ನನಗಿಲ್ಲ: ತಮ್ಮ ದೆಹಲಿ ಭೇಟಿಯ ವೇಳೆ ಹನಿಟ್ರ್ಯಾಪ್‌ಗೆ ಸಂಬಂಧಪಟ್ಟಂತೆ ಯಾವುದೇ ಚರ್ಚೆಗಳಾಗಿಲ್ಲ. ದೆಹಲಿಗೆ ಹೋಗಿ ರಾಜಕೀಯದ ದೂರುಗಳನ್ನು ನೀಡುವ ಅಗತ್ಯ ನನಗಿಲ್ಲ. ಕೇಂದ್ರ ಸಚಿವರನ್ನು ಭೇಟಿ ಮಾಡಿದಂತೆ ನಮ್ಮ ಪಕ್ಷದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ್ದೇನೆ. ದೆಹಲಿಗೆ ಹೋದ ಮೇಲೆ ವರಿಷ್ಠರನ್ನು ಭೇಟಿ ಸಮಾಲೋಚನೆ ನಡೆಸುವುದು ಸಾಮಾನ್ಯ. ಅದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಶಿಷ್ಟ ಸಮುದಾಯಗಳ ಶಾಸಕರು ಮತ್ತು ಮುಖಂಡರ ಸಭೆಗೆ ಅನುಮತಿ ಪಡೆದುಕೊಳ್ಳುವ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಲಿದ್ದಾರೆ. ಆ ವೇಳೆ ಅವರ ಜೊತೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಕೆ.ಎನ್.ರಾಜಣ್ಣ ದೂರು ಕೊಡಲು ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಕಡೆ ದಾಖಲೆ ಇದೆ ಅಂತ ಹೇಳಿದ್ದರು. ಸ್ವಲ್ಪ ತಡವಾಗಿರಬಹುದು, ಈಗಾಗಲೇ ದೂರು ನೀಡಿದ್ದಾರೆ. ಅದೇ ರೀತಿ ಕೊಲೆ ಯತ್ನದ ಕುರಿತು ಅವರ ಪುತ್ರ ರಾಜೇಂದ್ರ ರಾಜಣ್ಣ ಕೂಡ ದೂರು ನೀಡಿದ್ದು, ತನಿಖೆ ನಡೆದು ಎಲ್ಲವೂ ಹೊರಬರಲಿದೆ ಎಂದರು.
ರಾಜಣ್ಣ ಅವರ ಹನಿಟ್ರ್ಯಾಪ್ ಕೇಸ್ ಬೇರೆ, ರಾಜೇಂದ್ರ ಅವರ ಕೇಸ್ ಬೇರೆ. ಎರಡೂ ಒಂದಕ್ಕೊಂದು ಸಂಬಂಧ ಇಲ್ಲ.
ರಾಜೇಂದ್ರ ಕೇಸ್ ಸ್ವಲ್ಪ ಹಳೆಯದು, ಹನಿಟ್ರ್ಯಾಪ್ಗೂ ಇದಕ್ಕೂ ಸಂಬಂಧ ಇಲ್ಲ. ಸದನ ಮುಗಿದ ಬಳಿಕ ನಾನು ರಾಜಣ್ಣರನ್ನು ಭೇಟಿ ಮಾಡಿಲ್ಲ. ರಾಜಣ್ಣ ಸಿಕ್ಕಿದ ಮೇಲೆ ಚರ್ಚೆ ಮಾಡ್ತೇನೆ. ಎಲ್ಲದಕ್ಕೂ ಇತಿಶ್ರೀ ಹಾಡಬೇಕು, ಇಲ್ಲದಿದ್ದರೆ ಮತ್ತೆ ಹನಿಟ್ರ್ಯಾಪೇ ಹೋದಲ್ಲಿ ಬಂದಲ್ಲಿ ಚರ್ಚೆ ಆಗುತ್ತದೆ ಎಂದು ಹೇಳಿದರು.
Laxmi News 24×7