ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ವಿವಾದ ಸದ್ದು ಮಾಡುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಮಲ್ಲಿಕಾರ್ಜುನ ಖರ್ಗೆ, ಅವರ ಆರೋಗ್ಯ ವಿಚಾರಿಸಿದರು. ಮೊಣಕಾಲು ನೋವಿನಿಂದ ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದರು. ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಇದ್ದರು.
ಹನಿಟ್ರ್ಯಾಪ್ ಕುರಿತು ಈಗಾಗಲೇ ಸದನದಲ್ಲೇ ಸಚಿವ ರಾಜಣ್ಣ ಹೇಳಿಕೆ ನೀಡಿರುವುದು ಆಡಳಿತ ಪಕ್ಷದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಇತ್ತ ಬಿಜೆಪಿಯೂ ಈ ಬಗ್ಗೆ ಹೋರಾಟ ನಡೆಸಲು ಮುಂದಾಗಿದೆ. ಈ ಸಂಬಂಧ ಉನ್ನತಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಪರಮೇಶ್ವರ್ ಭರವಸೆ ನೀಡಿದ್ದಾರೆ. ಕೇಂದ್ರ ಮುಖಂಡರು ಸೇರಿ ಸುಮಾರು 48 ಮಂದಿಯ ಹನಿಟ್ರ್ಯಾಪ್ ಸಿಡಿ ಇದೆ ಎಂಬ ಸಚಿವ ರಾಜಣ್ಣ ಸ್ಫೋಟಕ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಇದೀಗ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 40 ನಿಮಿಷಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿ, ರಾಜಕೀಯ ವಿದ್ಯಮಾನ, ಹನಿಟ್ರ್ಯಾಪ್ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೇ ಮೊದಲ ಬಾರಿಗೆ ಕಾವೇರಿ ನಿವಾಸಕ್ಕೆ ಆಗಮಿಸಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದಾರೆ. ಚರ್ಚೆ ವೇಳೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆದಿದೆ. ಹನಿಟ್ರ್ಯಾಪ್ ವಿವಾದ ಭೇಟಿ ವೇಳೆ ಪ್ರಮುಖವಾಗಿ ಚರ್ಚೆಯಾಗಿದ್ದು, ಮುಂದಿನ ನಡೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
Laxmi News 24×7