Breaking News

ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ; ಕುಮಾರಸ್ವಾಮಿ ವಿರುದ್ಧ ಆತುರದ ಕ್ರಮ ಕೈಗೊಳ್ಳದಂತೆ ವಿಧಿಸಿದ್ದ ಆದೇಶ ವಿಸ್ತರಿಸಿದ ಹೈಕೋರ್ಟ್

Spread the love

ಬೆಂಗಳೂರು : ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ಅವರ ಪುತ್ರ ನಿಖಿಲ್‌ ಮತ್ತು ಶಾಸಕ ಸುರೇಶ್‌ ಬಾಬು ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸಂಜಯನಗರ ಠಾಣಾ ಪೊಲೀಸರಿಗೆ ಸೂಚಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶ ಮಾರ್ಚ್ 28ರವರೆಗೆ ಹೈಕೋರ್ಟ್‌ ವಿಸ್ತರಿಸಿ ಆದೇಶಿಸಿದೆ.

ಚಂದ್ರಶೇಖರ್‌ ನೀಡಿರುವ ದೂರು ಆಧರಿಸಿ ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿರುವ ಆರೋಪ ಸಂಬಂಧ ಸಂಜಯನಗರ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದು ಪಡಿಸಲು ಕೋರಿ ಹೆಚ್​.ಡಿ. ಕುಮಾರಸ್ವಾಮಿ, ನಿಖಿಲ್‌ ಹಾಗೂ ಸುರೇಶ್‌ಬಾಬು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಲೋಕಾಯುಕ್ತ ಪೊಲೀಸರ ಪರ ವಕೀಲರು ಹಾಜರಾಗಿ, ಎಡಿಜಿಪಿ ಚಂದ್ರೇಖರ್‌ ಅವರ ವಿರುದ್ಧದ ಬೆದರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಬಲವಂತ ಕ್ರಮ ಜರುಗಿಸಬಾರದು ಎಂದು ನ್ಯಾಯಾಲಯವು 2024ರ ನ.6 ರಂದು ಮಧ್ಯಂತರ ಆದೇಶ ಮಾಡಿದೆ. ಆದರೆ, ಈ ಆದೇಶವು ಕೆವಲ ಚಂದ್ರಶೇಖರ್‌ ಅವರು ದಾಖಲಿಸಿರುವ ಪ್ರಕರಣಕ್ಕೆ ಮಾತ್ರ ಅನ್ವಯಿಸುತ್ತದೆ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಬೇಕಿದೆ. ಇಲ್ಲವಾದರೆ ಕುಮಾರಸ್ವಾಮಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತ ಎಸ್‌ಐಟಿ ಪೊಲೀಸರು ಪ್ರಾಸಿಕ್ಯೂಷನ್‌ ನಡೆಸಲು ಕಷ್ಟವಾಗುತ್ತದೆ ಎಂದು ಪೀಠಕ್ಕೆ ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಲೋಕಾಯುಕ್ತ ಪೊಲೀಸರ ಮನವಿ ಕುರಿತು ಮಾ.28ರಂದು ವಾದ ಆಲಿಸಲಾಗುವುದು ಎಂದು ತಿಳಿಸಿ ಮಾ.28ಕ್ಕೆ ಅರ್ಜಿ ವಿಚಾರಣೆ ಮುಂದೂಡಿತು. ಅಲ್ಲಿಯವರೆಗೆ ನ.6ರ ಮಧ್ಯಂತರ ಆದೇಶವನ್ನು ವಿಸ್ತರಿಸಿತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ