ಕಾರವಾರ: ಅಂಕೋಲಾದ ಕೇಣಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ವಿರೋಧಿಸಿ ಸ್ಥಳೀಯ ಮೀನುಗಾರರ ಆಕ್ರೋಶ ಮತ್ತೆ ಜೋರಾಗಿದೆ. ಉದ್ದೇಶಿತ ಈ ವಾಣಿಜ್ಯ ಬಂದರನ್ನು ಕೈ ಬಿಡುವಂತೆ ಒತ್ತಾಯಿಸಿ ಅಂಕೋಲಾದ ಬೇಲೆಕೇರಿ ಕಡಲತೀರದಲ್ಲಿ ನೂರಾರು ಮೀನುಗಾರರು ಮಾನವ ಸರಪಳಿ ನಿರ್ಮಿಸಿ ಹಾಗೂ ಬೋಟ್‌ಗಳ ಮೂಲಕ ಸಮುದ್ರಕ್ಕೆ ತೆರಳಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕೇಣಿ ಹಾಗೂ ಭಾವಿಕೇರಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ಕಾರಣ ತಾಲೂಕಿನ ಬೇಲೆಕೇರಿ ಕಡಲತೀರದಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ ಸ್ಥಗಿತಗೊಳಿಸಿ ಒಂದೆಡೆ ಸೇರಿದ ಮೀನುಗಾರರು ಕಡಲತೀರದುದ್ದಕ್ಕೂ ಸುಮಾರು 1 ಕಿ.ಮೀ ಮಾನವ ಸರಪಳಿ ನಿರ್ಮಾಣ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದೆ. “ಗೋ ಬ್ಯಾಕ್ ಜೆಎಸ್‌ಡಬ್ಲೂ” ಘೋಷಣೆ ಕೂಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.ಇನ್ನು ನೂರಾರು ಮೀನುಗಾರರು,
ಸಾಂಪ್ರದಾಯಿಕ ಪಾತಿ ದೋಣಿ, ಯಾಂತ್ರಿಕ ಬೋಟುಗಳ ಮೂಲಕ ತೆರಳಿ ಸಮುದ್ರದಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ವಿನೂತನವಾಗಿ ಬಂದರು ಸರ್ವೇ ಕಾರ್ಯದ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಮೀನುಗಾರರು ಒಟ್ಟಾಗಿ ಏಕತೆ ಪ್ರದರ್ಶನ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಖಾಸಗಿ ಬಂದರು ಅಗತ್ಯವಿಲ್ಲ. ಬಂದರು ನಿರ್ಮಾಣ ಕೈಬಿಡಬೇಕು, ಇಲ್ಲವೇ ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು
Laxmi News 24×7