ದೊಡ್ಡಬಳ್ಳಾಪುರ (ಬೆಂಗಳೂರು) : ಸರ್ಕಾರಿ ಕಚೇರಿಗಳಲ್ಲಿ ಆನ್ಲೈನ್ ಸೇವೆಯ ನಂತರ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆಯೇ? ಎಂಬ ಬಗ್ಗೆ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ, ರಾಜ್ಯದ 25ಕ್ಕೂ ಹೆಚ್ಚು ಸಬ್ ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಇಂದು ಮಧ್ಯಾಹ್ನ 3 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ನಂತರ ದಾಖಲೆಗಳ ಪರಿಶೀಲನೆಗೆ ಮುಂದಾಗಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ವಿಚಾರದ ಬಗ್ಗೆ ತಿಳಿದ ತಹಶೀಲ್ದಾರ್, ಉಪವಿಭಾಗಾಧಿಕಾರಿ, ಕಚೇರಿಯ ಸಿಬ್ಬಂದಿ ಸ್ಥಳದಿಂದ ಓಡಿ ಹೋಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಉಪ ಲೋಕಾಯುಕ್ತ ಕೆ. ಎನ್ ಫಣೀಂದ್ರ ಸಾರ್ವಜನಿಕರ ಅಹವಾಲುಗಳನ್ನ ಕೇಳಿದ್ದಾರೆ. ಅದಕ್ಕವರು, ತಹಶೀಲ್ದಾರ್ ಕಚೇರಿ, ಎಸಿ ಆಫೀಸ್, ರೆಕಾರ್ಡ್ ರೂಂನಲ್ಲಿ ಹಣವಿಲ್ಲದೇ ಯಾವುದೇ ಕೆಲಸ ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ದೂರು ನೀಡಿ ಎಂದಾಗ ಯಾರೊಬ್ಬರೂ ಮುಂದೆ ಬಂದು ದೂರು ಕೊಟ್ಟಿಲ್ಲ.
ಈ ಕುರಿತು ಉಪ ಲೋಕಾಯುಕ್ತರಾದ ಕೆ. ಎನ್ ಫಣೀಂದ್ರ ಮಾತನಾಡಿ, ”ಸರ್ಕಾರಿ ಕಚೇರಿಗಳಲ್ಲಿ ಆನ್ಲೈನ್ ಮಾಡಿರುವುದರಿಂದ ಭ್ರಷ್ಟಾಚಾರ ಕಡಿಮೆಯಾಗಿರಬಹುದೇ? ಎಂಬುದನ್ನ ಪರಿಶೀಲಿಸಲು ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಹಾಜರಾತಿ ಬುಕ್ ಸರಿಯಾಗಿ ಮೆಂಟೈನ್ ಮಾಡಿಲ್ಲ. ಕ್ಯಾಶ್ ರಿಜಿಸ್ಟರ್ ಕೆಲವು ಬರೆದಿದ್ದಾರೆ, ಕೆಲವು ಬರೆದಿಲ್ಲ. ಏಕೆ ಎಂದು ಕೇಳಿದ್ದಕ್ಕೆ?, ಸಿಬ್ಬಂದಿ ಕೊರತೆ ಇದೆ ಎಂದು ಹೇಳುತ್ತಿದ್ದಾರೆ” ಎಂದರು.
ನ್ಯೂನತೆಗಳಿದ್ದಲ್ಲಿ ಅದನ್ನ ಸರಿಪಡಿಸಲು ಸೂಚನೆ: ”ರೆಕಾರ್ಡ್ ರೂಮಿನ ಬೀಗದ ಕೈ ಯಾರ ಬಳಿಯೂ ಇಲ್ಲ. ಕಸ್ಟೊಡಿಯನ್ ನನ್ನ ಬಳಿ ಕೀ ಇದೆ ಎನ್ನುತ್ತಾರೆ. ಆದರೆ, ಬೀಗ ತೆಗೆಯಲು ಸಾಧ್ಯವಾಗುತ್ತಿಲ್ಲ. ಅದಕೋಸ್ಕರ ನಮ್ಮ ಸಿಬ್ಬಂದಿಯನ್ನ ಇಲ್ಲಿಯೇ ಬಿಟ್ಟಿದ್ದೇವೆ. ನ್ಯೂನತೆಗಳನ್ನ ಸಾಯಂಕಾಲದವರೆಗೆ ಚೆಕ್ ಮಾಡುತ್ತಾರೆ. ಕಾನೂನು ಪ್ರಕಾರ ಯಾವ್ಯಾವ ರಿಜಿಸ್ಟಾರ್ ಮೆಂಟೈನ್ ಮಾಡಬೇಕಿತ್ತು ಅಥವಾ ಹಾಗೆಯೇ ಪ್ರಾಮಾಣಿಕವಾಗಿ ಮಾಡುತ್ತಿದ್ದಾರಾ? ಎಂಬಂತಹ ವಿಚಾರಗಳನ್ನ ತಿಳಿಯಬೇಕಾಗಿದೆ. ನಂತರ ನ್ಯೂನತೆಗಳಿದ್ದಲ್ಲಿ ಅದನ್ನ ಸರಿಪಡಿಸಲು ಸೂಚನೆ ನೀಡುತ್ತೇವೆ. ಅಧಿಕಾರಿಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ. ಈ ಬಗ್ಗೆ ಸರ್ಕಾರಕ್ಕೂ ಕೂಡಾ ಒಂದು ವರದಿಯನ್ನ ಕಳುಹಿಸಿಕೊಡುತ್ತೇವೆ” ಎಂದು ಹೇಳಿದರು.
Laxmi News 24×7