ಬೆಂಗಳೂರು: ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ನಿರಾಕರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಕರ್ನಾಟಕದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ಒಕ್ಕೂಟ ಬುಧವಾರ ಎಚ್ಚರಿಸಿತು.
ಪರೀಕ್ಷೆಯ ವೇಳೆ ಹಿಜಾಬ್ ನಿಷೇಧ ಮುಂದುವರಿಯಲಿದೆ ಎಂಬ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಯನ್ನು ಟೀಕಿಸಿರುವ ಒಕ್ಕೂಟದ ಅಧ್ಯಕ್ಷ ಸಿ.ಆರ್.ಮುಹಮ್ಮದ್ ಇಮ್ತಿಯಾಜ್, “ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ನಿಷೇಧಿಸುವ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಗಾಗಲೇ ರದ್ದುಗೊಳಿಸಿದೆ” ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
“ಈ ಕುರಿತ ಪ್ರಕರಣ ನ್ಯಾಯಾಲಯದಲ್ಲಿದೆ. ಹಾಗಾಗಿ, ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಅನ್ವಯಿಸುವುದಿಲ್ಲ ಎಂಬುದು ಹೈಕೋರ್ಟ್ ತೀರ್ಪಿನಲ್ಲಿದೆ. ಸಚಿವರ ಹೇಳಿಕೆ ಹೈಕೋರ್ಟ್ ನಿರ್ಧಾರದ ವಿರುದ್ಧ” ಎಂದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಬಾರದು ಅಥವಾ ಪರೀಕ್ಷೆಗೆ ಹಾಜರಾಗದಂತೆ ತಡೆಯಬಾರದು ಎಂದು ಶಿಕ್ಷಣ ಇಲಾಖೆ, ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶಿಸಿದೆ. ಹೀಗಾಗಿ, ಅಲ್ಪಸಂಖ್ಯಾತ ಸಂಸ್ಥೆಗಳ ವಿದ್ಯಾರ್ಥಿನಿಯರು ತಮ್ಮ ಹಿಜಾಬ್‌ಗಳೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸಲು ಅವಕಾಶ ನೀಡುವಂತೆ ಪರೀಕ್ಷಾ ಅಧಿಕಾರಿಗಳು ಮತ್ತು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಬೇಕು” ಎಂದು ಇದೇ ವೇಳೆ ಒತ್ತಾಯಿಸಿದರು.
“ಹೈಕೋರ್ಟ್ ಆದೇಶವನ್ನು ತಕ್ಷಣ ಜಾರಿಗೆ ತರದಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಸಚಿವರು ಸೇರಿದಂತೆ ಅಧಿಕಾರಿಗಳು ಹೈಕೋರ್ಟ್‌ನ ನಿರ್ದೇಶನವನ್ನು ಪಾಲಿಸಲು ವಿಫಲವಾದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇವೆ” ಎಂದು ಅವರು ಎಚ್ಚರಿಸಿದರು.
Laxmi News 24×7