ದಾವಣಗೆರೆ: ”ನಿತಿನ್ ಗಡ್ಕರಿಯವರು ಈ ದೇಶದ ಪ್ರಧಾನಿಯಾದರೆ ಒಳ್ಳೆಯದಾಗುತ್ತದೆ. ಬಿಜೆಪಿ ಈ ದೇಶದಲ್ಲಿ ಅಧಿಕಾರ, ಆಡಳಿತದಲ್ಲಿ ಇರಬಾರದು ಎಂಬುದು ನನ್ನ ಅಭಿಪ್ರಾಯ. ಆದರೆ ಜನಮನ್ನಣೆ ಅವರಿಗೆ ಸಿಕ್ಕಿದೆ. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಬೇರೆಯವರಿಗೆ ಪ್ರಧಾನಿ ಹುದ್ದೆ ಕೊಟ್ಟರೆ ದೇಶ ಒಂದು ದಿಕ್ಕಿನಲ್ಲಿ ಹೋಗಬಹುದು” ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ದಾವಣಗೆಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರನ್ನು ಟೀಕಿಸಿದರೆ ರಾಜ್ಯದಲ್ಲಿ ಸಚಿವರಿಗೆ ಅವರ ಸ್ಥಾನ ಉಳಿಯುತ್ತದೆ ಎಂಬ ಪ್ರಲ್ಹಾದ್ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, “ನನ್ನ ಹಣೆಬರಹ ಅದು, ಯಾರೂ ಏನೂ ಮಾಡುವುದಕ್ಕೆ ಆಗಲ್ಲ. ದೇಶದ ಜನತೆಗೆ ಕೇಂದ್ರದ ಐವರು ಮಂತ್ರಿಗಳ ಹೆಸರು ಗೊತ್ತಿಲ್ಲದಂತೆ ಮಾಡಿದ್ದಾರೆ ಪ್ರಧಾನಿಗಳು. ಎಲ್ಲದಕ್ಕೂ ಪ್ರಧಾನಿಗಳನ್ನೇ ತೋರಿಸಿದರೆ ಜಿಲ್ಲಾ, ತಾಲ್ಲೂಕು ಗ್ರಾಮ ಪಂಚಾಯತಿ ಏಕೆ ಬೇಕು” ಎಂದು ಲಾಡ್ ಪ್ರಶ್ನಿಸಿದರು.
14 ಸೈಟ್ಗಳ ಬಗ್ಗೆ ಮಾತ್ರ ಚರ್ಚೆ: ”ಮುಡಾ ಹಗರಣದಲ್ಲಿ ಸಿಎಂ ಹಾಗೂ ಅವರ ಪತ್ನಿಗೆ ಕ್ಲೀನ್ ಚಿಟ್ ಸಿಕ್ಕಿರುವುದು ಖುಷಿ ತಂದಿದೆ. ಬಿಜೆಪಿಯವರ ಷಡ್ಯಂತ್ರದಿಂದ ಕೇಸ್ ಆಗಿತ್ತು. ಈಗ ಲೋಕಾಯುಕ್ತವೇ ಕ್ಲೀನ್ ಚಿಟ್ ನೀಡಿದೆ. ಬಿಜೆಪಿಯವರಿಗೆ ನ್ಯಾಯಾಂಗ ತಕ್ಕ ಪಾಠ ಕಲಿಸಿದೆ. ಇದುವರೆಗೂ ಕೇವಲ 14 ಸೈಟ್ಗಳ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಆದರೆ 125ಕ್ಕೂ ಹೆಚ್ಚು ಸೈಟ್ಗಳ ಕುರಿತಂತೆ ಮಾತ್ರ ಯಾಕೆ ಚರ್ಚೆಯಾಗುತ್ತಿಲ್ಲ. ಆ ಸೈಟ್ಗಳನ್ನು ನೀಡಿದವರು ಯಾರು, ಯಾವ ಆಧಾರದ ಮೇಲೆ ಕೊಡಲಾಗಿದೆ ಎಂಬುದು ಚರ್ಚೆ ಆಗಬೇಕಲ್ವಾ?” ಎಂದರು.
ಬಿಜೆಪಿ ಅವಧಿಯಲ್ಲಿ ಪ್ರಾರಂಭಿಸಿದ ವಿಶ್ವವಿದ್ಯಾಲಯಗಳನ್ನು ಕಾಂಗ್ರೆಸ್ ಸರ್ಕಾರ ಮುಚ್ಚುತ್ತಿದೆ ಎನ್ನುವ ಆರೋಪ ವಿಚಾರವಾಗಿ ಮಾತನಾಡಿ, “ಬಿಜೆಪಿ ಅವಧಿಯಲ್ಲಿ ವಿವಿಗಳನ್ನು ಪ್ರಾರಂಭ ಮಾಡಿದರು. ಆದರೆ ಎಷ್ಟು ಹಣವನ್ನು ವಿವಿಗೆ ಮೀಸಲಿಟ್ಟಿದ್ದಾರೆ ಎನ್ನುವುದು ಗೊತ್ತಾ? ಒಂದು ವಿವಿಗೆ ಎರಡು ಕೋಟಿ ಅನುದಾನ ಬಿಡುಗಡೆ ಮಾಡಿದರೆ ಅದು ಸಾಧ್ಯವೇ? ವಿವಿಗಳನ್ನು ಪ್ರಾರಂಭಿಸುವುದಕ್ಕೆ ರಾಜಕೀಯವಾಗಿ ಯೋಚನೆ ಮಾಡುವುದಕ್ಕಿಂತ, ಸೌಲಭ್ಯ ಒದಗಿಸಬೇಕಲ್ವಾ” ಎಂದು ಹೇಳಿದರು.
Laxmi News 24×7