Breaking News

ಮಹಾಕುಂಭಕ್ಕೆ ನಿರೀಕ್ಷೆಮೀರಿದ ಜನಸಾಗರ; ವ್ಯಾಪಾರ ವಹಿವಾಟು ಮೂರು ಲಕ್ಷ ಕೋಟಿ

Spread the love

ನವದೆಹಲಿ, ಫೆಬ್ರುವರಿ 19: ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ ಮುಂದಿನ ವಾರ ಸಮಾಪ್ತಿಗೊಳ್ಳಲಿರುವ ಮಹಾಕುಂಭ ಮೇಳ ನಿರೀಕ್ಷೆಮೀರಿದ ಯಶಸ್ಸು ಕಾಣುತ್ತಿದೆ. ಜನವರಿ 13ರಂದು ಆರಂಭವಾಗಿರುವ ಮತ್ತು ಪ್ರತೀ 144 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳದಲ್ಲಿ ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚಿನ ಜನರು ಈವರೆಗೆ ಭೇಟಿ ನೀಡಿದ್ದಾರೆ. ಇಡೀ ಕುಂಭಮೇಳದ ಆರು ವಾರದಲ್ಲಿ ಒಟ್ಟು 40 ಕೋಟಿ ಭಕ್ತರು ಆಗಮಿಸಬಹುದು ಎಂದು ಭಾವಿಸಲಾಗಿತ್ತು. ಆದರೆ, ಈವರೆಗಿನ ಸಂಖ್ಯೆ 55 ಕೋಟಿ ಮೀರಿದೆ. ಇನ್ನೊಂದು ವಾರ ಬಾಕಿ ಇದ್ದು ಒಟ್ಟು ಜನಭೇಟಿ ಸಂಖ್ಯೆ 60 ಕೋಟಿಗಿಂತಲೂ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

ವಿಶ್ವದ ಇತಿಹಾಸದಲ್ಲಿ ಯಾವತ್ತೂ ಕೂಡ ಒಂದು ಕಾರ್ಯಕ್ರಮಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದೇ ಇಲ್ಲ. ಆ ಮಟ್ಟಿಗೆ ಇದು ವಿಶ್ವದಾಖಲೆಯ ಕಾರ್ಯಕ್ರಮ. ಮಹಾಕುಂಭಮೇಳ ಒಂದು ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ, ಆರ್ಥಿಕತೆಗೆ ಪುಷ್ಟಿ ಕೊಡುವ ಬಹುದೊಡ್ಡ ಮಾರುಕಟ್ಟೆಯೇ ಆಗಿಹೋಗಿದೆ.

3 ಲಕ್ಷ ಕೋಟಿ ರೂ ಬಿಸಿನೆಸ್

ಮಹಾಕುಂಭಮೇಳದಲ್ಲಿ ವಿವಿಧ ವಸ್ತುಗಳ ವ್ಯಾಪಾರ, ಸಾರಿಗೆ ಇತ್ಯಾದಿಯಿಂದ 2 ಲಕ್ಷ ಕೋಟಿ ರೂ ಬಿಸಿನೆಸ್ ಆಗುವ ನಿರೀಕ್ಷೆ ಇತ್ತು. ಈಗ ಹೆಚ್ಚಿನ ಜನಪ್ರವಾಹ ಇರುವುದನ್ನು ಗಮನಿಸಿದರೆ ಮೂರು ಲಕ್ಷ ಕೋಟಿ ರೂ ಬಿಸಿನೆಸ್ ಆಗಬಹುದು ಎಂದು ಅಖಿಲ ಭಾರತ ವ್ಯಾಪಾರಿಗಳ ಮಹಾ ಒಕ್ಕೂಟವಾದ ಸಿಎಐಟಿಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲವಾಲ್ ಹೇಳಿದ್ದಾರೆ.

ಉತ್ತರಪ್ರದೇಶದ ಆರ್ಥಿಕತೆಗೆ ಮಹಾಕುಂಭಮೇಳ ಹೊಸ ಬಲಕೊಟ್ಟಿದೆ. ಜನಪ್ರವಾಹ ಮಹಾಕುಂಭಮೇಳವನ್ನು ಕೇಂದ್ರವಾಗಿಸಿ ಬರುತ್ತಿದೆಯಾದರೂ, ಅದರಲ್ಲಿ ಬಹಳಷ್ಟು ಜನರು ಉತ್ತರಪ್ರದೇಶದ ಇತರ ಧಾರ್ಮಿಕ ಕ್ಷೇತ್ರಗಳತ್ತಲೂ ಹೋಗುತ್ತಿದ್ದಾರೆ. ಅದರಲ್ಲೂ ಹೊಸದಾಗಿ ನಿರ್ಮಾಣವಾಗಿರುವ ಅಯೋಧ್ಯೆ ರಾಮನ ಮಂದಿರ, ಕಾಶಿ ಮೊದಲಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿಯೂ ಕೂಡ ಬಿಸಿನೆಸ್ ಚುರುಕುಗೊಳ್ಳುವಂತೆ ಮಾಡಿದೆ.

ಮೂರು ಲಕ್ಷ ಕೋಟಿ ರೂ ಸಾಧಾರಣ ಮೊತ್ತವಲ್ಲ. ಕರ್ನಾಟಕದ 2024-25ರ ಬಜೆಟ್​ನ ಗಾತ್ರ 3.72 ಲಕ್ಷ ಕೋಟಿ ರೂ ಇತ್ತು. ಹೆಚ್ಚೂಕಡಿಮೆ ಅಷ್ಟು ಪ್ರಮಾಣದ ಬಿಸಿನೆಸ್ ಅನ್ನು ಕುಂಭಮೇಳ ದಕ್ಕಿಸಿದೆ.ಭಾರತದ ನಾಲ್ಕು ಸ್ಥಳಗಳಲ್ಲಿ ಕುಂಭ ಮೇಳಗಳು ನಡೆಯುತ್ತವೆ.

ಹರಿದ್ವಾರ, ಪ್ರಯಾಗರಾಜ್, ನಾಶಿಕ್ ಮತ್ತು ಉಜ್ಜೈನಿಯಲ್ಲಿ ಪ್ರತೀ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ನಾಲ್ಕು ಸ್ಥಳಗಳಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಪೂರ್ಣ ಕುಂಭ ಮೇಳ ಜರುಗುತ್ತದೆ. ಇದರ ಮಧ್ಯೆ ಹರಿದ್ವಾರ ಮತ್ತು ಪ್ರಯಾಗರಾಜ್​ನಲ್ಲಿ ಆರು ವರ್ಷಗಳಿಗೊಮ್ಮೆ ಅರ್ಧಕುಂಭ ಮೇಳ ನಡೆಯುತ್ತದೆ. ಪ್ರತೀ ಹನ್ನೆರಡನೇ ಪೂರ್ಣ ಕುಂಭಮೇಳವನ್ನು ಮಹಾಕುಂಭಮೇಳವಾಗಿ ಆಚರಿಸಲಾಗುತ್ತಿದೆ. ಕುಂಭಮೇಳದ ಸಂದರ್ಭದಲ್ಲಿ ನದಿಯಲ್ಲಿ ಮಿಂದೆದ್ದರೆ ಪಾಪನಾಶವಾಗುತ್ತದೆ ಎನ್ನುವ ನಂಬಿಕೆ ಹಿಂದೂ ಧಾರ್ಮಿಕರಲ್ಲಿದೆ.


Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ