ಬೆಳಗಾವಿ : ಪ್ರಯಾಗರಾಜ್ನಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಜನ ಸೇರಿದ್ದರು. ಇಂಥ ಸಂದರ್ಭದಲ್ಲಿ ಆ ಘಟನೆ ಆಗಬಾರದಿತ್ತು. ಆದರೆ, ಅನಾಹುತ ಸಂಭವಿಸಿದೆ. ಮೃತರ ಕುಟುಂಬಸ್ಥರಿಗೆ ದೇವರು ನೋವು ಭರಿಸುವ ಶಕ್ತಿ ಕೊಡಲಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮೃತ ಭಕ್ತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಈಗ ಇಬ್ಬರ ಮೃತದೇಹಗಳು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರುತ್ತಿವೆ. ನಾನು ಕೂಡ ಪಾರ್ಥಿವ ಶರೀರದ ದರ್ಶನ ಪಡೆದು ಗೌರವ ನಮನ ಸಲ್ಲಿಸುತ್ತೇನೆ ಎಂದರು.
ಪ್ರಯಾಗ್ರಾಜ್ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಅವರಲ್ಲಿ 24 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಈಗಷ್ಟೇ ಕಾಲೇಜು ವ್ಯಾಸಂಗ ಮುಗಿಸಿದ್ದರು. ಇನ್ನು ಜೀವನ ದೊಡ್ಡದಿತ್ತು. ನಾವು ಮೃತರ ಕುಟುಂಬಸ್ಥರ ಜೊತೆಗೆ ಇದ್ದೇವೆ ಎಂದು ಹೇಳಿದರು.
ಉತ್ತರಪ್ರದೇಶ ಸರ್ಕಾರದ ವೈಫಲ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 144 ವರ್ಷಗಳ ಬಳಿಕ ಮಹಾಕುಂಭಮೇಳ ನಡೆಯುತ್ತಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಜನದಟ್ಟಣೆ ನಿಯಂತ್ರಿಸಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ. ಆದರೂ ಜನ ತಮ್ಮ ಸುರಕ್ಷತೆ ನೋಡಿಕೊಳ್ಳಬೇಕು ಎಂದು ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ನಮ್ಮ ತಂದೆ ಸತೀಶ್ ಜಾರಕಿಹೊಳಿ ಅವರು ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
Laxmi News 24×7