ಬೆಂಗಳೂರು: “ಅಪಘಾತ ಪೂರ್ವನಿಯೋಜಿತ ಕೃತ್ಯ ಅಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಹಣ ಸಾಗಾಟ ಮಾಡಿದ್ರು ಅನ್ನೋದು ತಪ್ಪು” ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಸ್ಪಷ್ಟಪಡಿಸಿದ್ದಾರೆ.
ಅವರು ಸುಳ್ಳು ಆರೋಪ ಮಾಡ್ತಿದ್ದಾರೆ: ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, “ಛಲವಾದಿ ನಾರಾಯಣಸ್ವಾಮಿ ಮಾತು ಕೇಳಿದೆ. ಪರಿಷತ್ನಲ್ಲಿ ಅವರು ಪ್ರತಿಪಕ್ಷ ನಾಯಕರು. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾರದ್ದೋ ಪ್ರಭಾವದಲ್ಲಿ ಆರೋಪ ಮಾಡುತ್ತಿದ್ದಾರೆ ಅನ್ನಿಸುತ್ತಿದೆ. ಅಪಘಾತ ಪ್ರಕರಣದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಮಹಿಳೆ ಅಪಘಾತದಿಂದ ಆಸ್ಪತ್ರೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಂಥ ಮಾತು ಬೇಕಾ?” ಎಂದು ಪ್ರಶ್ನಿಸಿದರು.
ಆಂತರಿಕ ಕಚ್ಚಾಟ ಮುಚ್ಚಿಹಾಕಲು ಈ ಆರೋಪ: “ಅವರ ಆಂತರಿಕ ಕಚ್ಚಾಟಗಳು ಹೆಚ್ಚಿವೆ. ಅದಕ್ಕೆ ಇಂತಹ ಆರೋಪ ಮಾಡ್ತಿದ್ದಾರೆ. ನಾವು ಪ್ರಯಾಣ ಮಾಡಿದ್ದು ಸರ್ಕಾರಿ ವಾಹನದಲ್ಲಿ. ಸರ್ಕಾರಿ ಚಾಲಕ, ಸರ್ಕಾರಿ ಗನ್ ಮ್ಯಾನ್ ಇದ್ರು. ನಾವು ನಾಲ್ಕು ಜನ ಕಾರಿನಲ್ಲಿ ಇದ್ದೆವು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೊರಟ್ಟಿದ್ದೆವು. ಎಸ್ಕಾರ್ಟ್ ಅನ್ನು ನಾವು ಕೊಂಡೊಯ್ದಿರಲಿಲ್ಲ” ಎಂದರು.