ಹುಬ್ಬಳ್ಳಿ: ಸಮಸ್ಯೆಯ ಸುಳಿಯಲ್ಲಿರುವ ಕಮರಿಪೇಟೆ ಪೊಲೀಸ್ ಠಾಣೆ ಕಟ್ಟಡದ ಸ್ಥಳಾಂತರಕ್ಕೆ ಕಾಲ ಕೂಡಿ ಬಂದಿದೆಯಾದರೂ, ಸ್ಥಳಾಂತರ ಭಾಗ್ಯ ಮಾತ್ರ ಇನ್ನೂ ಬಂದಿಲ್ಲ!
15 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡ ಇದಾಗಿದ್ದು, ರಾಜಕಾಲುವೆ ಮೇಲೆಯೇ ನಿರ್ಮಿಸಲಾಗಿದೆ. ಇದೇ ರಾಜಕಾಲುವೆ ಮೇಲೆ ಪಕ್ಕದ ರಾಷ್ಟ್ರೀಯ ಹೆದ್ದಾರಿ ಸಹ ಹಾದು ಹೋಗಿದ್ದು, ಕಾಲುವೆಯ ತಳಭಾಗ ಅಲ್ಲಲ್ಲಿ ಶಿಥಿಲವಾಗಿದೆ. ಠಾಣೆಯ ಎದುರು ಸರಕು ತುಂಬಿದ ಲಾರಿಯೋ ಅಥವಾ ಬೃಹತ್ ವಾಹನವೋ ಸಾಗಿದರೂ ಸಾಕು, ಕಾಲುವೆಯ ತಡೆಗೋಡೆ ಕಂಪಿಸಿದಂತಾಗುತ್ತದೆ. ಠಾಣೆಯ ಕಟ್ಟಡ ಕೂಡ ಗಡಗಡ ನಡುಗಿದಂತೆ ಭಾಸವಾಗುತ್ತದೆ. ಯಾವಾಗ ಏನಾಗುತ್ತದೆಯೋ ಎಂಬ ಆತಂಕ ಶುರುವಾಗಿದ್ದು, ಪೊಲೀಸರು ಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಠಾಣೆಯು ಬಳಕೆಗೆ ಯೋಗ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸ್ಪಷ್ಟನೆ ಕೂಡ ನೀಡಿದೆ.
![]()
ಸ್ಥಳಾಂತರಕ್ಕೆ ಮೌಖಿಕ ಆದೇಶ: ಇಂತಹದ್ದೊಂದು ಆತಂಕದ ವರದಿಯ ಬೆನ್ನಲ್ಲೇ 2024ರ ಮೇ 15ರಂದು ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಇಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಥಳಾಂತರ ಕುರಿತು ಮೌಖಿಕ ಆದೇಶ ಕೂಡ ನೀಡಿದ್ದರು. ಈ ಹಿನ್ನೆಲೆಯಲ್ಲಿ ಠಾಣೆ ಸ್ಥಳಾಂತರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ವಲಯ 9ರ ಸಹಾಯಕ ಆಯುಕ್ತರು ಮೇ 23ರಂದೇ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತಿಳಿಸಿದ್ದರು. ಆದರೆ, ಈಗ 8 ತಿಂಗಳಾಗುತ್ತ ಬಂದರೂ ಠಾಣೆ ಮಾತ್ರ ಸ್ಥಳಾಂತರವಾಗಿಲ್ಲ.
Laxmi News 24×7