Breaking News

ರಭಸದ ಗಾಳಿ, ಮಳೆ: ನೆಲಕಚ್ಚಿದ ಟೊಮೆಟೊ, ಹಾಗಲಕಾಯಿ, ಭತ್ತ

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲೆ, ಹುಬ್ಬಳ್ಳಿ ನಗರ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಬೆಳಗಿನ ಜಾವದಲ್ಲಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನಲ್ಲಿ ರಭಸದ ಗಾಳಿಗೆ ನೂರಾರು ಎಕರೆ ಭತ್ತದ ಗದ್ದೆಗೆ ಹಾನಿಯಾಗಿದೆ.

ರಭಸದ ಗಾಳಿ, ಮಳೆ: ನೆಲಕಚ್ಚಿದ ಟೊಮೆಟೊ, ಹಾಗಲಕಾಯಿ, ಭತ್ತ

ಧಾರಾಕಾರ ಮಳೆಗೆ ಧಾರವಾಡ ತಾಲ್ಲೂಕಿನ ಕಮಲಾಪುರದಲ್ಲಿ ಜಮೀನಿನಲ್ಲಿ ಟೊಮೆಟೊ ಹಾಗೂ ಹಾಗಲಕಾಯಿ ಬೆಳೆ ನೆಲಕಚ್ಚಿವೆ. ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದ್ದು ಕಲಘಟಗಿ ಭಾಗದಲ್ಲಿ ಹೆಚ್ಚು 5.5 ಸೆಂ.ಮೀ ಮಳೆಯಾಗಿದೆ.

ಹುಬ್ಬಳ್ಳಿ ನಗರದಲ್ಲಿ ಬೆಳಗಿನ ಜಾವ ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಒಂದು ತಾಸಿಗೂ ಹೆಚ್ಚು ಸಮಯ ಧಾರಾಕಾರ ಮಳೆ ಬಿದ್ದಿದೆ.

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತಡರಾತ್ರಿ ಮಳೆಯಾಗಿದೆ. ಹೊನ್ನಾವರ, ಶಿರಸಿ, ಸಿದ್ದಾಪುರ ಭಾಗದಲ್ಲಿ ಸಾಯಂಕಾಲ ಮಳೆಯಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ತಾಲ್ಲೂಕಿನ ನದಿ ತೀರದ ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗಿನ ಜಾವ ಸುರಿದ ಬಿರುಗಾಳಿ ಸಹಿತ ಮಳೆಗೆ ನೂರಾರು ಎಕರೆ ಭತ್ತದ ಬೆಳೆ ಹಾನಿಗೀಡಾಗಿದೆ. ಬ್ಯಾಲಹುಣ್ಸಿ, ಮಕರಬ್ಬಿ, ಹಿರೇಬನ್ನಿಮಟ್ಟಿ, ಅಂಗೂರು, ಕೋಟಿಹಾಳ ಮೊದಲಾದ ಗ್ರಾಮಗಳಲ್ಲಿ ಕಟಾವಿಗೆ ಬಂದಿರುವ ಭತ್ತದ ಬೆಳೆ ನೆಲಕ್ಕೊರಗಿದೆ.

‘ಗಾಳಿ ಮಳೆಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು’ ಎಂದು ಬ್ಯಾಲಹುಣ್ಸಿ ಗ್ರಾಮದ ರೈತ ಲಕ್ಷ್ಮಣ ಬಾರ್ಕಿ ಆಗ್ರಹಿಸಿದ್ದಾರೆ.

ಮೆಕ್ಕೆಜೋಳ ಕಟಾವು ಮಾಡಿರುವ ರೈತರು ಫಸಲನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು. ರಸ್ತೆ, ಕಣಗಳಲ್ಲಿ ಒಣಗಲು ಹಾಕಿರುವ ಮೆಕ್ಕೆಜೋಳದ ರಾಶಿಗಳನ್ನು ತಾಡಪಾಲಿನಿಂದ ಮುಚ್ಚಿ ರಕ್ಷಿಸಿದರು.

 ಹೂವಿನಹಡಗಲಿ ತಾಲ್ಲೂಕಿನ ಬ್ಯಾಲಹುಣ್ಸಿಯಲ್ಲಿ ಗಾಳಿ ಮಳೆಯಿಂದ ಕಟಾವಿನ ಹಂತಕ್ಕೆ ಬಂದ ಭತ್ತದ ತೆನೆಗಳು ನೆಲಕ್ಕೆ ಒರಗಿರುವುದು


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ