ಚಿಕ್ಕೋಡಿ: ಬಿಜೆಪಿ ( BJP) ನಾಯಕರ ಜೊತೆ ಆರ್‌ಎಸ್‌ಎಸ್ (RSS) ನಡೆಸಿದ ಸಂಘಟನಾ ಸಭೆ ವಿಚಾರವಾಗಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಪ್ರತಿಕ್ರಿಯೆ ನೀಡಿದ್ದು, ಈ ಸಂದರ್ಭದಲ್ಲಿ ಸ್ವಪಕ್ಷೀಯ ನಾಯಕರ ವಿರುದ್ಧವೇ ಗುಡುಗಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ವಿರುದ್ದ ಮತ್ತೊಮ್ಮೆ ಗುಡುಗಿರುವ ರಮೇಶ್ ಜಾರಕಿಹೊಳಿ, ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ (BJP State President) ಎಂದು ಒಪ್ಪಿಲ್ಲ ಒಪ್ಪುವುದೂ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿಜಯೇಂದ್ರವ ರಾಜ್ಯಾಧ್ಯಕ್ಷ ಸ್ಥಾನ ಎಂದೂ ಒಪ್ಪಲ್ಲ
ಹೌದು, ಅಥಣಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಆರ್‌ಎಸ್‌ಎಸ್ ಸಭೆಯಲ್ಲಿ ಏನ್ ಚರ್ಚೆ ಆಯಿತು ಎಂದು ಹೇಳೋಕೆ ಬರಲ್ಲ. ಸಭೆಯಲ್ಲಿ ಯಾರು ಯಾರನ್ನು ಬೈದ್ರು ಅಂತಾನೂ ಹೇಳೋಕೆ ಬರಲ್ಲ. ತಪ್ಪು ಮಾಡಿದವರನ್ನು ಸಭೆಯಲ್ಲಿ ಮುಖಂಡರು ಬೈದಿದ್ದಾರೆ. ವಿಜಯೇಂದ್ರ ಅವರ ಅಧ್ಯಕ್ಷ ಸ್ಥಾನವನ್ನು ಎಂದೂ ಒಪ್ಪೋದಿಲ್ಲ. ಮುಂದಿನ ಅಧ್ಯಕ್ಷ ಯಾರು ಎಂಬುದು ಪಕ್ಷದ ವರಿಷ್ಠರು ತೀರ್ಮಾನ ಮಾಡಬೇಕು. ವಿಜಯೇಂದ್ರ ಪಕ್ಷದಲ್ಲಿ ಜೂನಿಯರ್, ಅವನಿಗೆ ಏನು ಐಡಿಯಾಲಜಿ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ವಿಜಯೇಂದ್ರ ಭಾರತೀಯ ಜನತಾ ಪಕ್ಷದ ಭ್ರಷ್ಟ
ವಿಜಯೇಂದ್ರ ಭಾರತೀಯ ಜನತಾ ಪಕ್ಷದ ಭ್ರಷ್ಟ ಎಂಬ ಲೇಬಲ್ ಗೆ ಅಷ್ಟೇ ಸೀಮಿತವಾಗಿದ್ದಾರೆ. ಭಾರತಿ ಜನತಾ ಪಕ್ಷಕ್ಕೆ ಭ್ರಷ್ಟ ಅಂತ ಲೇಬಲ್ ಕೊಟ್ಟಿದ್ದು ವಿಜಯೇಂದ್ರ. ಅವನು ಅಧ್ಯಕ್ಷ ಆಗಿದ್ದಕ್ಕೆ ನನಗೆ ವಿರೋಧವಿದೆ. ನಾನು ಯಡಿಯೂರಪ್ಪನವರಿಗೆ ಯಾವತ್ತೂ ವಿರೋಧಿ ಅಲ್ಲ. ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ. ಯಡಿಯೂರಪ್ಪರ ಬಗ್ಗೆ ನಮಗೆ ತುಂಬಾ ಗೌರವವಿದೆ. ವಿಜಯೇಂದ್ರ ನಮ್ಮ ಪಕ್ಷದ ನಾಯಕನಲ್ಲ. ಅನಂತ್ ಕುಮಾರ್ ತೀರಿಕೊಂಡ ಮೇಲೆ ಬಿಜೆಪಿಯಲ್ಲಿ ಯಾರು ಪ್ರಬಲ ನಾಯಕನಾಗಿಲ್ಲ. ಬಿಜೆಪಿಯ ಆಡಳಿತವನ್ನು ಒಬ್ಬರ ಕೈಯಲ್ಲಿ ಕೊಡುವುದು ಬೇಡ. ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಡುವಂತೆ ನಾವು ಮೊನ್ನೆ ಸಭೆಯಲ್ಲಿ ಹೇಳಿದ್ದೇವೆ ಎಂದರು.
ಸಾಮೂಹಿಕ ನಾಯಕತ್ವದಲ್ಲಿ ಹೋಗಬೇಕು
ಒಬ್ಬರ ಕೈಗೆ ಪಕ್ಷ ಸಿಕ್ಕರೆ ನಾನು ಕೂಡ ಎರಡನೇ ಯಡಿಯೂರಪ್ಪನಾಗುತ್ತೇನೆ. ಆ ಚೇರ್ ಮೇಲೆ ಕೂತರೆ ಸರ್ವಾಧಿಕಾರಿ ಧೋರಣೆ ಬರುತ್ತದೆ. 15 ರಿಂದ 20 ಜನರ ಸಾಮೂಹಿಕ ನಾಯಕತ್ವದ ಕೈಯಲ್ಲಿ ಲೀಡರ್ ಶಿಪ್ ಕೊಡುವಂತೆ ಮನವಿ ಮಾಡಿದ್ದೇವೆ. ಬಿಜೆಪಿ ವರಿಷ್ಠರು ನೀವು ಇಂತ ಇಂತ ಕೆಲಸ ಮಾಡುವಂತೆ ಟಾಸ್ಕ್ ನೀಡಿ. 120 ರಿಂದ 130 ಸ್ಥಾನಗಳನ್ನು ಗೆಲ್ಲಿಸಿಕೊಡುವ ಶಕ್ತಿ ನಮ್ಮಲ್ಲಿದೆ. ನಾನು ಕೂಡ ಮೊನ್ನೆ ಸಂಘ ಪರಿವಾರದ ಸಭೆಯಲ್ಲಿ ಅದನ್ನೇ ಹೇಳಿದ್ದೇನೆ. ವರಿಷ್ಠರು ಕೊಟ್ಟಂತಹ ಟಾಸ್ಕ್ ನಲ್ಲಿ ಫೇಲಾದರೆ ನಮ್ಮನ್ನು ಒದ್ದು ಹೊರಗಾಕಿ ಎಂದಿದ್ದೇನೆ. ಯಡಿಯೂರಪ್ಪನವರಿಗೆ ವಯಸ್ಸಾಯ್ತು ಅವರಿಗೆ ವಿಶ್ರಾಂತಿ ಅಗತ್ಯವಿದೆ. ಅವರ ಸಲಹೆ ಬೇಕಾದರೆ ಅವರ ಮನೆಗೆ ಹೋಗುತ್ತೇವೆ ಎಂದರು.
ಎಫ್‌ಎಸ್‌ಎಲ್ ವರದಿ ಬರುವವರೆಗೆ ನಮ್ಮವರು ಕಾಯಬೇಕು
ಇನ್ನೂ ಮುನಿರತ್ನ ಬಂಧನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮುನಿರತ್ನ ಬೈದಿರುವುದು ಇನ್ನೂ ಪ್ರೂವ್ ಆಗಿಲ್ಲ. ಆಗಲೇ ನಮ್ಮ ಬಿಜೆಪಿ ನಾಯಕರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಫ್ ಎಸ್ ಎಲ್ ವರದಿ ಬರುವವರೆಗೆ ನಮ್ಮವರು ಮಾತನಾಡಬಾರದು. ವಿಜಯಪುರ ಸಂಸದ ರಮೇಶ ಜಿಗಿಜಣಿಗಿ ವಿರುದ್ಧ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರೇ ಒತ್ತಾಯ ಮಾಡಿದ್ದಾರೆ. ಅವರು ಹಿಂದೆ ಮುಂದೆ ನೋಡದೆ ಈ ರೀತಿ ಮಾತನಾಡುತ್ತಿದ್ದಾರೆ.
ಡಿಕೆಶಿ ವಿರುದ್ದ ವಾಗ್ದಾಳೆ
ಇದನ್ನು ಸಿಡಿ ಶಿವು ಮಾಡಿದ್ದಾನೆ, ಆತ ವಿರೋಧಿಗಳನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತಾನೆ ಎಂದು ಹೆಸರು ಹೇಳದೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾನು ಒಬ್ಬ ಗಟ್ಟಿ ಇದ್ದೇನೆ ಎಂದು ಹೊರಗಡೆ ಇದ್ದೇನೆ. ನಾನು ಉಮೇಶ್ ಕತ್ತಿ ಜಾತಿ ಬಗ್ಗೆ ನಿಂದನೆ ಮಾಡುತ್ತಿದ್ದೇವು. ನಾನು ಒಬ್ಬರು ಸ್ನೇಹಿತರಾಗಿ ಬೈಯುತ್ತಿದ್ದೇವು. ಡಿಕೆಶಿ ಕಂಪನಿ ರಾಜ್ಯದಲ್ಲಿ ನನ್ನ ಮೊದಲು ಬಲಿ ಪಡೆದರು. ನಂತರ ದೇವೇಗೌಡ ಕುಟುಂಬ ಬಲಿ ಪಡೆದರು. ಇದೀಗ ಮುನಿರತ್ನ ಅವರನ್ನು ಬಲಿ ಪಡೆದುಕೊಂಡಿದೆ. ಮುಂದೆ ಯಾರೂ ಬೀಳುತ್ತಾರೆ ನೋಡಿ, ಇದನ್ನೆಲ್ಲಾ ನೋಡಿದರೆ ಒಂದು ಫಿಲ್ಮ್ ನೋಡಿದ ರೀತಿ ಆಗುತ್ತದೆ. ಸಿಡಿ ಶಿವುನಿಂದ ಕಾಂಗ್ರೆಸ್ ನಾಯಕರು ಸಫರ್ ಆಗ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರದಾನಿ, ಸಿಬಿಐ ಕ್ರಮ ವಹಿಸಬೇಕು ಎಂದು ಪ್ರಧಾನಿ ಅವರಿಗೆ ಮಾದ್ಯಮಗಳ ಮೂಲಕ ರಮೇಶ್ ಜಾರಕಿಹೊಳಿ ಮನವಿ ಮಾಡಿದರು.