ಬಾಗಲಕೋಟೆ: ‘ವಿಶೇಷ ಔಷಧ ಗುಣಗಳುಳ್ಳ ತರಕಾರಿಗಳತ್ತ ಜನರು ವಾಲುತ್ತಿದ್ದಾರೆ. ಅಂತಹ ಭಾರತೀಯ ತರಕಾರಿ ಜಾಗತಿಕ ಮಟ್ಟದಲ್ಲಿ ಮಾರಾಟ ಆಗುವಂತೆ ಆಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ತೋಟಗಾರಿಕೆ ಸಂಶೋಧನಾ ವಿಸ್ತರಣಾ ಕೇಂದ್ರದಿಂದ ಮುಖ್ಯ ಆವರಣದಲ್ಲಿ ಸೋಮವಾರದಿಂದ ಆರಂಭವಾದ ಮೂರು ದಿನಗಳ ಸಸ್ಯ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ತರಕಾರಿ ಬೆಳೆಗಳಿಗೆ ವಿಷಕಾರಿ ಔಷಧ ಉಪಯೋಗಿಸುವುದು ವಾಡಿಕೆಯಾಗಿದೆ.
ಜವಾರಿ ಎನಿಸಿಕೊಂಡ ಜೋಳ ಕೂಡ ಕಲಬೆರಕೆಯಾಗತೊಡಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಸಾವಯವ ಕೃಷಿಯೊಂದಿಗೆ ತರಕಾರಿ ಬೆಳೆದು ಬೇರೆ ರಾಷ್ಟ್ರಕ್ಕೆ ರಪ್ತು ಮಾಡಲು ಎಲ್ಲ ವ್ಯವಸ್ಥೆಗಳು ಇದ್ದಾಗ ಆ ಕಡೆ ಹೆಚ್ಚು ಗಮನ ಹರಿಸದೇ ಇರುವುದು ವಿಷಾದನೀಯ ಸಂಗತಿ. ರೈತರು ಬೆಳೆದ ತರಕಾರಿಯನ್ನು ಬೆಳೆದ ಸ್ಥಳದಲ್ಲಿಯೇ ಯೋಗ್ಯ ದರದಲ್ಲಿ ಖರೀದಿಸುವ ವ್ಯವಸ್ಥೆ ಆಗಬೇಕಿದೆ’ ಎಂದರು.
‘ರೈತರು ಕೂಡ ಉತೃಷ್ಟ ಹಾಗೂ ಸಾವಯವ ಕೃಷಿ ಪದ್ಧತಿ ಬಳಸಿಕೊಂಡು ಕಲಬೆರಕೆ ರಹಿತ, ರಾಸಾಯನಿಕ ಬಳಸದ ತರಕಾರಿಗಳನ್ನು ಬೆಳೆಯಿರಿ. ನಶಿಸಿ ಹೋಗುತ್ತಿರುವ ದೇಸಿ ತರಕಾರಿ ಹಾಗೂ ಹಣ್ಣುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಆಗಬೇಕು’ ಎಂದು ಹೇಳಿದರು.