ಬೆಂಗಳೂರು: ಇದೇ ಜೂ. 19 ಕ್ಕೆ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 18 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ರಾಜಕೀಯ ಚಟುವಟಿಗೆಗಳು ತೀವ್ರತೆ ಪಡೆದುಕೊಂಡಿವೆ.
ಮುಖ್ಯವಾಗಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ, ತೇಜಸ್ವಿನಿ ಅನಂತಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಪಿ ಮುರುಳೀಧರ ರಾವ್ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಅಂದಿನ ಸಭೆಯಲ್ಲಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಶಾಸಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.
ಈಗಾಗಲೇ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತಕ್ಕೆ ಕಾರಣವೇ ರಾಜ್ಯಸಭೆ ಚುನಾವಣೆಯ ಟಿಕೆಟ್. ತನ್ನ ಸಹೋದರನಿಗೆ ಟಿಕೆಟ್ ಕೊಡಿಸಲು ಉಮೇಶ್ ಕತ್ತಿ ಬಿಜೆಪಿ ಶಾಸಕರರನ್ನು ಸೇರಿಸಿಕೊಂಡು ಸಭೆ ಮಾಡಿದ್ದಾರೆ. ಅಲ್ಲದೇ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಕೊಡಿಸುವಲ್ಲಿ ಪಣ ತೊಟ್ಟಿದ್ದಾರೆ. ಹೀಗಾಗಿ ಮುಂದೆ ಏನಾದರೂ ರಮೇಶ್ ಕತ್ತಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ ಅಂದರೆ ಸದ್ಯ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಮತ್ತಷ್ಟು ಸ್ಫೋಟಗೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ಸಿಎಂ ಯಡಿಯೂರಪ್ಪ ಭಿನ್ನಮತ ಸ್ಪೋಟಕ್ಕೂ ಮುನ್ನ ಆ ಶಾಸಕರ ಜೊತೆ ಮಾತನಾಡಿ, ಅವರ ಅಭಿಪ್ರಾಯ ಸಂಗ್ರಹ ಮಾಡಿ ಅದರ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಲು ಮುಂದಾಗಿದ್ದಾರೆ. ಇನ್ನು ಈ ಸಭೆಯ ನೆಪದಲ್ಲಿ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಶಮನ ಮಾಡಲು ಸಿಎಂ ಪ್ಲಾನ್ ರೂಪಿಸಿದ್ದಾರೆ.
ಕಾಂಗ್ರೆಸ್ ನಲ್ಲೂ ಲಾಬಿ: ಇನ್ನು ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಬಹುದು. ಈ ಸ್ಥಾನವನ್ನು ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ನೀಡುವ ಸಾಧ್ಯತೆ ಇದೆ. ಖರ್ಗೆ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಬ್ಯಾಟಿಂಗ್ ಮಾಡಿದ್ದಾರೆ. ಈ ನಡುವೆ ದೊಡ್ಡಗೌಡರಿಗೆ ತುಮಕೂರಿನಲ್ಕಿ ಟಿಕೆಟ್ ಬಿಟ್ಟುಕೊಟ್ಟೆ. ನನಗೆ ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ಕಾಂಗ್ರೆಸ್ನ ಮುದ್ದು ಹನುಮೇಗೌಡ ಸೈಲೆಂಟ್ ಆಗಿ ಬೇಡಿಕೆ ಇಟ್ಟಿದ್ದಾರೆ.
ವಾರಾಂತ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆವಿದೆ.