ಅಥಣಿ: ಶಾಸಕ ಮಹೇಶ ಕುಮಟಳ್ಳಿ ಅವರಿಗೆ ಸದ್ಯದಲ್ಲಿ ಸಚಿವ ಸ್ಥಾನ ನೀಡುವ ಆಲೋಚನೆ ಇಲ್ಲ ಅಂತಾ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಅಥಣಿ ತಾಲೂಕಿನ ನೀರಾವರಿ ಕಾಮಗಾರಿ ಪರಿಶೀಲನೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಸದ್ಯದಲ್ಲಿ ಇಲ್ಲ. ನಾವು ಅಥಣಿ ತಾಲೂಕು ನೀರಾವರಿ ಅಭಿವೃದ್ದಿಗೆ ಒತ್ತು ನೀಡುತ್ತಿದ್ದೇವೆ ಅಂತಾ ಸಮಜಾಯಿಷಿ ನೀಡಿ ಜಾರಿಕೊಂಡರು.
ಜಮಖಂಡಿಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಎಂಎಲ್ಸಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಎಂಎಲ್ಸಿ ವಿಚಾರಕ್ಕೆ ಸಂಬಂಧಿಸಿದಂತೆ ವರಿಷ್ಠರು ನಿರ್ಧರಿಸಿದ್ದಾರೆ ಎಂದಷ್ಟೇ ಹೇಳಿದ್ರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪ ಚುನಾವಣೆ ವೇಳೆ ಭರವಸೆ ನೀಡಿದ್ರು. ಆದ್ರೆ ಬಳಿಕ ಮಹೇಶ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಮುಂದಿನ ದಿನಗಳಲ್ಲಿ ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ರು.
ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿ ನೀರಿನ ಅಭಾವ ತಪ್ಪಿಸಲು ಮಹಾರಾಷ್ಟ್ರದ ಸರ್ಕಾರ ಜೊತೆ ಮಾತುಕತೆ ನಡೆದಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ರು.
ಸೋಮವಾರ ಅಥಣಿ ವಿಧಾನಸಭೆ ವ್ಯಾಪ್ತಿಯಲ್ಲಿನ ನೀರಾವರಿ ಯೋಜನೆಗೆ ಕಾಮಗಾರಿ ಪರಿಶೀಲನೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಾಗಿದೆ. ಕಕಮರಿ ಕೊಟ್ಟಲಗಿ ನೀರಾವರಿ ಯೋಜನೆಯನ್ನು ಆದಷ್ಟು ಬೇಗ ರೂಪಿಸಲಾಗುವುದು. ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅಥಣಿ ತಾಲೂಕಿನ ನೀರಾವರಿ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲಾಗುವುದು. ಕೃಷಿ ಒಣ ಭೂಮಿಗಳಿಗೆ ಸದ್ಯದಲ್ಲೇ ನೀರಾವರಿ ಯೋಜನೆಗಳನ್ನು ರೂಪಿಸಲಾಗುವುದು ಎಂದರು.