Breaking News

ಕಾಮಕುಮಾರ​ ನಂದಿ ಮಹಾರಾಜರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ‌ ಶಾಸಕ ಅಭಯ ಪಾಟೀಲ್​ ಸರ್ಕಾರವನ್ನು ಒತ್ತಾಯ

Spread the love

ಬೆಳಗಾವಿ : ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈ‌ನ‌ ಮುನಿಗಳಾದ ಕಾಮಕುಮಾರ​ ನಂದಿ ಮಹಾರಾಜರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಆಗ್ರಹಿಸಿದರು. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುನಿಗಳು ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಪೊಲೀಸರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ಜೈನ ಸಮುದಾಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ತನಿಖೆ ಅನುಮಾನ ಮೂಡಿಸುವಂತಿದೆ. ಹಾಗಾಗಿ ಸಿಬಿಐಗೆ ವಹಿಸಿ ಪಾರದರ್ಶಕವಾಗಿ ತನಿಖೆ ಕೈಗೊಳ್ಳಬೇಕು ಎಂದು ಹೇಳಿದರು.

ಮುನಿಗಳ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ಹಿಂದೇಟು ಹಾಕುತ್ತಾರೆ. ಆದರೆ, ಸ್ವಾಮೀಜಿ ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಹೇಳಲು ಅವರು ಹಿಂಜರಿಯುತ್ತಿಲ್ಲ. ಈ ರೀತಿ ಪೊಲೀಸರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಒಂದು ಧರ್ಮದ ತುಷ್ಟೀಕರಣ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಜೈನ ಸಮುದಾಯದ ಯಾವುದೇ ಮುನಿಗಳು ಎಂದಿಗೂ ಹಣ ಮುಟ್ಟುವುದಿಲ್ಲ ಮತ್ತು ಹಣಕಾಸಿನ ವ್ಯವಹಾರ ಮಾಡುವುದಿಲ್ಲ. ಆಶ್ರಮದ ಟ್ರಸ್ಟಿಗಳು ಅದನ್ನು ನಿರ್ವಹಿಸುತ್ತಾರೆ. ಆದರೆ, ಮುನಿಗಳ ಕುರಿತಾಗಿ ನಿರ್ದಿಷ್ಟವಾದ ಹೇಳಿಕೆ ನೀಡುವಂತೆ ಸ್ಥಳೀಯರಿಗೆ ಪೊಲೀಸರು ಒತ್ತಡ ಹಾಕುತ್ತಿರುವ ನಡೆ ಸರಿಯಲ್ಲ. ಸದನದಲ್ಲಿ ಸೋಮವಾರ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಅಭಯ ಪಾಟೀಲ್ ತಿಳಿಸಿದರು.

ಹಿರೇಕೋಡಿಯ ಆಶ್ರಮದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿತ್ತು. ಕಟ್ಟಡ ಸಾಮಗ್ರಿಗಳ ಖರೀದಿಗೆ ಆರೋಪಿಗೆ ಹಣ ನೀಡಲಾಗಿತ್ತು. ಬಳಿಕ ಆತ ಸಾಮಗ್ರಿ ಪೂರೈಸಿರಲಿಲ್ಲ. ಅಲ್ಲದೇ ಹಣವನ್ನೂ ಮರಳಿಸಿರಲಿಲ್ಲ. ಆಶ್ರಮದ ಟ್ರಸ್ಟಿನವರು ಪ್ರಶ್ನಿಸಿದ್ದರು. ಮುನಿಗಳ ಗಮನಕ್ಕೆ ತಂದಾಗ, ಅವರೂ ಕೂಡ ಅಸಮಾಧಾನಗೊಂಡಿದ್ದರು. ಇದು ಮುನಿಗಳ ಹತ್ಯೆಗೆ ಕಾರಣ ಆಗಿರಬಹುದು. ಆದರೆ, ಅವರೇ ಸ್ವತಃ ಹಣಕಾಸಿನ ವ್ಯವಹಾರ ಮಾಡಿಲ್ಲ ಎಂದು ಅಭಯ ಪಾಟೀಲ ಸ್ಪಷ್ಟನೆ ನೀಡಿದರು.

ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಪ್ರಕರಣದ ಸರಿಯಾದ ರೀತಿಯಲ್ಲಿ ತನಿಖೆ ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಯಾರೂ ಪ್ರತಿಭಟನೆ ಮಾಡಬೇಡಿ ಎಂದೂ ಕೇಳಿಕೊಂಡಿದ್ದಾರೆ. ಆದರೆ, ಈಗ ಸಮಾಜದ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಜೈನ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ