ಯಾದಗಿರಿ: ಮಹಾರಾಷ್ಟ್ರ ಕಂಟಕದಿಂದ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದು, ಈಗ ಮತ್ತೊಂದು ಆತಂಕ ಎದುರಾಗಿದೆ. ವರದಿ ಬರುವ ಮುನ್ನವೇ ಕ್ವಾರಂಟೈನ್ ಕೇಂದ್ರದಲ್ಲಿದ್ದವರನ್ನು ಮನೆಗೆ ಕಳುಹಿಸಿದ ಪರಿಣಾಮ ಯಾದಗಿರಿ ನಗರದಲ್ಲಿ ಕೊರೊನಾ ಭೀತಿ ಶುರುವಾಗಿದೆ.
ಕೊರೊನಾ ಪರೀಕ್ಷೆಯ ವರದಿ ಬರುವ ಮುನ್ನವೇ ಮಹಾರಾಷ್ಟ್ರದಿಂದ ಬಂದವರನ್ನು ಮನೆಗೆ ಕಳುಹಿಸಲಾಗಿದೆ. ನಗರದ ವಿವಿಧ ವಾರ್ಡ್ ಗಳಲ್ಲಿ ಹೋಮ್ ಕ್ವಾರಂಟೈನ್ ನಲ್ಲಿದ್ದ 18 ಜನರಿಗೆ, ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕು ಪತ್ತೆಯಾದ 18 ಜನ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ, ನಗರದ ವಿವಿಧೆಡೆ ಸಂಚಾರ ಮಾಡಿದ್ದಾರೆ. ಇದರಿಂದಾಗಿ ಜಿಲ್ಲಾಡಳಿತಕ್ಕೆ ಹೊಸ ತಲೆ ನೋವು ಶುರುವಾಗಿದೆ.
ನಗರದ ವಾರ್ಡ್ ನಂ.9ರ ತಪಾಡಗೇರಾದಲ್ಲಿ ಒಂದೇ ಕುಟುಂಬದ 15 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರ ಜೊತೆ ಕೋಳಿವಾಡದ ಇಬ್ಬರಿಗೆ, ವಾರ್ಡ್ ನಂ.25ರ ಲಕ್ಷ್ಮಿ ನಗರದ ಒಬ್ಬರಿಗೆ ಕೊರೊನಾ ಪತ್ತೆಯಾಗಿದೆ. ಇವರೆಲ್ಲರೂ ಹೋಮ್ ಕ್ವಾರಂಟೈನ್ ನಿಯಮ ಪಾಲಿಸದೆ ನಗರದಲ್ಲಿ ಸಂಚರಿಸಿದ್ದಾರೆ. ಹೀಗಾಗಿ ಇವರು ಎಲ್ಲೆಲ್ಲಿ ಓಡಾಡಿದ್ದಾರೋ ಎಂಬ ಭಯ ಇದೀಗ ಶುರುವಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಲಕ್ಷ್ಮಿ ನಗರ ಹಾಗೂ ಕೋಳಿವಾಡ ಬಡವಾವಣೆಯ 100 ಮೀಟರ್ ವ್ಯಾಪ್ತಿಯನ್ನು ಕಂಟ್ಮೋನೆಂಟ್ ಝೋನ್ ಎಂದು ಘೋಷಣೆ ಮಾಡಿ, ಸೀಲ್ ಡೌನ್ ಮಾಡಲಾಗಿದೆ. ಹೀಗಾಗಿ ಹಳ್ಳಿ, ತಾಂಡಾಗಳಿಗಲ್ಲದೇ ಈಗ ನಗರ ಪ್ರದೇಶಕ್ಕೂ ಕೊರೊನಾ ಎಂಟ್ರಿ ಕೊಟ್ಟಿದ್ದು, ಯಾದಗಿರಿ ಜನ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.