ತೋಟದೊಳಗೆ ಬರುತ್ತಿವೆ ಎಂದು ಪಾಪಿಗಳು ಬಾಳೆಹಣ್ಣಿಗೆ ವಿಷಹಾಕಿ 20ಕ್ಕೂ ಹೆಚ್ಚು ಹಸುಗಳನ್ನು ಕೊಂದಿರುವ ಆಘಾತಕಾರಿ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.
ಐಗೂರಿನ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ಈ ಘಟನೆ ನಡೆದಿದ್ದು, ಎಸ್ಟೇಟ್ ಒಳಗೆ ಸ್ಥಳೀಯ ದನಗಳು ಹೋಗುತ್ತಿದ್ದರಿಂದ ಎಸ್ಟೇಟ್‍ನ ಮ್ಯಾನೇಜರ್ ಮತ್ತು ಸಿಬ್ಬಂದಿ ಸೇರಿ ಬಾಳೆಹಣ್ಣಿಗೆ ವಿಷ ಹಾಕಿ ಹಸುಗಳಿಗೆ ತಿನಿಸಿ ಕೊಂದಿದ್ದಾರೆ. ಈ ರೀತಿ ಕಳೆದ ಹಲವು ದಿನಗಳಿಂದ 20ಕ್ಕೂ ಹೆಚ್ಚು ಹಸುಗಳಿಗೆ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸತ್ತ ಹಸುಗಳನ್ನು ಯಾರಿಗೂ ಅನುಮಾನ ಬಾರದಂತೆ ಎಸ್ಟೇಟ್ ಒಳಗಿನ ದೊಡ್ಡ ಕಂದಕಕ್ಕೆ ಹಾಕಿ ಮರಗಳನ್ನು ಕಡಿದು ಹಾಕಿದ್ದಾರೆ.ಹಸುಗಳು ಕಾಣೆಯಾಗಿದ್ದರಿಂದ ಅನುಮಾನಗೊಂಡ ಗ್ರಾಮದವರು, ಹುಡುಕಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ಎಸ್ಟೇಟ್ ಮ್ಯಾನೇಜರ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಎಸ್ಟೇಟ್ ಮ್ಯಾನೇಜರ್ ಹಸುಗಳು ಎಸ್ಟೇಟ್ ನೊಳಗೆ ಸತ್ತು ಬಿದ್ದಿದ್ದವು. ಆದ್ದರಿಂದ ಗುಂಡಿಗೆ ಹಾಕಿ ಮುಚ್ಚಿದೆವು. ಸತ್ತಿದ್ದು ಹೇಗೆ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸದ್ಯ ಎಸ್ಟೇಟ್ ಮ್ಯಾನೇಜರ್ ಮತ್ತು ಸಿಬ್ಬಂದಿ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮುಗ್ದ ಗೋವುಗಳಿಗೆ ವಿಷವಿಟ್ಟ ಕುರಿತು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.