ಮುಂಬೈ, ಜೂ. 25- ಅಮೆರಿಕಾ ಹಾಗೂ ಚೀನಾದ ನಡುವಿನ ಸಂಘರ್ಷ, ವ್ಯಾಪಾರ ಬಿಕ್ಕಟ್ಟು ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿರುವುದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ನಿರಂತರ 19 ದಿನಗಳಿಂದಲೂ ಏರಿಕೆಯಾಗುತ್ತಿದ್ದು ಇದರ ನಡುವೆಯೇ ಚಿನ್ನ ಹಾಗೂ ಬೆಳ್ಳಿ ಬೆಲೆಯು ಗಗನಮುಖಿಯಾಗುತ್ತಿರುವುದು ಜನರ ಜೇಬಿಗೆ ಹೊರೆಯಾಗಿದೆ.
ಲಾಕ್‍ಡೌನ್ ವೇಳೆ ಚಿನ್ನ ಹಾಗೂ ಬೆಳ್ಳಿ ಖರೀದಿಸುವವರೇ ಇಲ್ಲದೆ ಅದರ ಬೆಲೆಯಲ್ಲಿ ಇಳಿಮುಖವಾಗಿತ್ತಾದರೂ ಲಾಕ್‍ಡೌನ್ ಸಡಿಲಿಕೆ ನಂತರ ಚಿನ್ನ ಕೊಳ್ಳಲು ಗ್ರಾಹಕರು ಮನಸ್ಸು ಮಾಡಿರುವುದರಿಂದ ಚಿನ್ನದ ಬೆಲೆಯು ದಿನೇದಿನೇ ಏರಿಕೆಯಾಗುತ್ತಿದೆ.
ಇಂದು ಕೂಡ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 42.30 ರೂ.ಗಳು ಏರಿಕೆಯಾಗಿರುವುದರಿಂದ ಪ್ರತಿ ಹತ್ತು ಗ್ರಾಂ ಚಿನ್ನ ಕೊಳ್ಳಲು 50 ಸಾವಿರವರೆಗೂ ವ್ಯಯಿಸಬೇಕಾಗಿದೆ. ದೆಹಲಿಯಲ್ಲೂ ಹಳದಿ ಲೋಹದ ಬೆಲೆಯು ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯು 49,352 ರೂ.ಗಳಿಗೆ ಮುಟ್ಟಿದೆ
ನಿನ್ನೆ 10 ಗ್ರಾಂ ಚಿನ್ನದ ಬೆಲೆಯು 48,190 ರಷ್ಟಿತ್ತು ಆದರೆ ಇಂದು 423 ರೂ. ಏರಿಕೆಯಾಗಿದೆಯಾದರೂ ಬೆಳ್ಳಿ ಬೆಲೆಯಲ್ಲಿ ತುಸು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 45,360 ರಷ್ಟಿದ್ದರೆ, ಕೆಜಿ ಬೆಳ್ಳಿ ಬೆಲೆಯು 48,460 ರೂ.ಗೆ ಮುಟ್ಟಿದೆ.
ಮಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,690 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,460 ರೂ. ಆಗಿದೆ. ಕೊಲ್ಕತ್ತಾದಲ್ಲಿ 10 ಗ್ರಾಂ ಚಿನ್ನದ ಬೆಲೆ 47,750 ರೂ. ಹಾಗೂ 1 ಕೆಜಿ ಬೆಳ್ಳಿ ದರ 48,460 ರೂ. ಆಗಿದೆ