ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ತಗಲಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸೋಂಕು ತಗುಲಿಸಿಕೊಂಡಿದ್ದ ಇಬ್ಬರು ಮಹಿಳೆಯರಿಂದ ಅವರ ಮಕ್ಕಳಿಗೂ ಸೋಂಕು ಹರಡಿದೆ.
ಎಪ್ರಿಲ್ 19ರಂದು ಮೃತಪಟ್ಟಿದ್ದ ಬಂಟ್ವಾಳ ಕಸಬಾ ನಿವಾಸಿ ಮಹಿಳೆಯ 16 ವರ್ಷದ ಪುತ್ರಿಗೆ ಸೋಂಕು ಆಗಿದ್ದರೆ, ಬೋಳೂರಿನ ವೃದ್ಧ ಮಹಿಳೆಯ ಸಂಪರ್ಕದಲ್ಲಿದ್ದ 11 ವರ್ಷದ ಬಾಲಕಿ ಮೊಮ್ಮಗಳು ಮತ್ತು 35 ವರ್ಷದ ಮಗಳಿಗೆ ಸೋಂಕು ಕಾಣಿಸಿಕೊಂಡಿದೆ.
ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಒಟ್ಟು 13 ಮಂದಿಗೆ ಕೊರೊನಾ ಹರಡಿದ್ದು, ಎಲ್ಲರೂ ಈಗ ವೆನ್ಲಾಕ್ ಮತ್ತು ಫಸ್ಟ್ ನ್ಯೂರೋ ಐಸೊಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಇರುವ ಬಹಳಷ್ಟು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 15 ದಿನಗಳ ಬಳಿಕ ಕೆಲವರಲ್ಲಿ ಸೋಂಕು ದೃಢಪಡುತ್ತಿದೆ.
ಈಗ ಫಸ್ಟ್ ನ್ಯೂರೋ ಆಸ್ಪತ್ರೆಯೇ ದಕ್ಷಿಣ ಕನ್ನಡದ ಪಾಲಿಗೆ ಕೊರೊನಾ ವಾಹಕ ಆಗಿ ಪರಿವರ್ತನೆಗೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ ನಿಗಾ ಇಟ್ಟಿದ್ದು ಬಂಟ್ವಾಳ ಮತ್ತು ಮಂಗಳೂರಿನ ಒಟ್ಟು ಎಂಟು ಕಡೆ ಈಗ ಸೀಲ್‍ಡೌನ್ ಜಾರಿಯಲ್ಲಿದೆ. ಉಳಿದಂತೆ ಜಿಲ್ಲೆಯಾದ್ಯಂತ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಚಟುವಟಿಕೆ ಆರಂಭಗೊಂಡಿದೆ.