ಮುಂಬೈ: ಐಪಿಎಲ್‍ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ ಅವರು, ತಮ್ಮ ವಿಶ್ವಶ್ರೇಷ್ಠ ಟಿ-20 ತಂಡವನ್ನು ಆಯ್ಕೆ ಮಾಡಿದ್ದು, ಭಾರತದ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅವರಿಗೆ ನಾಯಕ ಪಟ್ಟ ದೊರೆತಿದೆ.
ಟಾಮ್ ಮೂಡಿ ಅವರು, ಸದ್ಯದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಇರುವ ಖ್ಯಾತ ಕೋಚ್ ಆಗಿದ್ದಾರೆ. ಇವರ ತರಬೇತಿಯಲ್ಲಿ ಹೈದರಾಬಾದ್ ತಂಡ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗ ಕಮೆಂಟೇಟರ್ ಹರ್ಷ ಭೋಗ್ಲೆ ನಡೆಸಿರುವ ಸಂದರ್ಶನದಲ್ಲಿ ಭಾಗಿಯಾಗಿದ್ದ ಮೂಡಿ ತಮ್ಮ ನೆಚ್ಚಿನ ಟಿ-20 ಪಂದ್ಯವನ್ನು ಆಯ್ಕೆ ಮಾಡಿದ್ದಾರೆ. ಈ ತಂಡಕ್ಕೆ ಕೊಹ್ಲಿ, ಧೋನಿ ಅವರನ್ನು ಬಿಟ್ಟು ಓಪನರ್ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದು, ಟಿ-20ಗೆ ಕೊಹ್ಲಿಗಿಂತ ರೋಹಿತ್ ಸರಿಯಾದ ನಾಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ನಾನು ಹೆಸರಿಸುವ ತಂಡ ಪ್ರಸಕ್ತ ಸಾಲಿನಲ್ಲಿ ಆಡುತ್ತಿರುವ ಆಟಗಾರರನ್ನು ಒಳಗೊಂಡಿದೆ ಮತ್ತು ಮುಂದಿನ ಮೂರು ವಾರದಲ್ಲಿ ನಡೆಯುವ ಪಂದ್ಯಗಳನ್ನು ಮನದಲ್ಲಿ ಇಟ್ಟುಕೊಂಡಂತೆ ಭಾವಿಸಿ ಈ ತಂಡವನ್ನು ಹೆಸರಿಸುತ್ತಿದ್ದೇನೆ ಎಂದು ಮೂಡಿ ತಿಳಿಸಿದ್ದಾರೆ. ಹೀಗಾಗಿ ಟಾಪ್ ಆರ್ಡರ್ ಅಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಅವರನ್ನು ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಮೂಲಕ ಮೊದಲಿಗೆ ಎಡಗೈ ಮತ್ತು ಬಲಗೈ ಬ್ಯಾಟಿಂಗ್ ಟಾಮ್ ಒತ್ತು ನೀಡಿದ್ದಾರೆ.
ಆರಂಭಿಕರ ನಂತರ ಮೂರನೇ ಕ್ರಮಾಂಕದಲ್ಲಿ ಭಾರತದ ನಾಯಕ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದಾರೆ. ನಂತರ ನಾಲ್ಕನೇ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ದೈತ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಬಳಿಕ ವಿಕೆಟ್ ಕೀಪರ್ ಅನ್ನು ಆಯ್ಕೆ ಮಾಡಿದ್ದು, ನನಗೆ ವೈಯಕ್ತಿವಾಗಿ ಇಂಗ್ಲೆಂಡ್‍ನ ಜೋಸ್ ಬಟ್ಲರ್ ಇಷ್ಟ ಆದರೆ ಕೋಚ್ ಆಗಿ ಆ ಕ್ರಮಾಂಕಕ್ಕೆ ಎಡಗೈ ಬ್ಯಾಟ್ಸ್ ಮ್ಯಾನ್ ಬೇಕಾಗಿರುವ ಕಾರಣ ವೆಸ್ಟ್ ಇಂಡೀಸ್‍ನ ನಿಕೋಲಸ್ ಪೂರನ್ ಅವರನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ತನ್ನ ಶ್ರೇಷ್ಠ ಟಿ-20 ತಂಡದಲ್ಲಿ ಭಾರತದ ಮಾಜಿ ನಾಯಕ ಧೋನಿ ಅವರನ್ನು ಆಯ್ಕೆ ಮಾಡದಕ್ಕೆ ಕಾರಣ ಹೇಳಿರುವ ಮೂಡಿ, ನಾನು ಈ ತಂಡವನ್ನು ಈಗಿನ ಪ್ರಸಕ್ತ ಸಮಯಕ್ಕೆ ಆಯ್ಕೆ ಮಾಡಿದ್ದೇನೆ. ಹೀಗಾಗಿ ಧೋನಿ ಅವರು ಈ ತಂಡಕ್ಕೆ ಬೇಡ. ಇಲ್ಲವಾದರೆ ಧೋನಿ ನನ್ನ ಮೊದಲ ಆಯ್ಕೆಯಾಗುತ್ತಿದ್ದರು. ನಾನು ಕೂಡ ಧೋನಿ ಅವರ ದೊಡ್ಡ ಅಭಿಮಾನಿ ಎಂದು ಮೂಡಿ ತಿಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆಲ್‍ರೌಂಡರ್ ಗೆ ಮಣೆ ಹಾಕಿರುವ ಮೂಡಿ ಆಂಡ್ರೆ ರೆಸಲ್, ಸುನಿಲ್ ನರೈನ್, ಮಿಚಲ್ ಸ್ಟಾರ್ಕ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ ಮತ್ತು ಜೋಫ್ರಾ ಆರ್ಚರ್ ಅವರನ್ನು ಆಯ್ಕೆ ಮಾಡಿದ್ದಾರೆ.
ಮೂಡಿ ಟಿ-20 ತಂಡ
ರೋಹಿತ್ ಶರ್ಮಾ(ನಾಯಕ), ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ, ಜೋಫ್ರಾ ಆರ್ಚರ್ (ರವೀಂದ್ರ ಜಡೇಜಾ ಹನ್ನೆರಡನೇ ಆಟಗಾರ).