ಬೆಳಗಾವಿ: ನಗರ ಹೊರವಲಯದ ಕಣಬರ್ಗಿಯಲ್ಲಿರುವ ಕೆರೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಡಿ ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಪಕ್ಷಿಗಳ ಪರಿವೀಕ್ಷಣಾ ಗ್ಯಾಲರಿ, ಬಯಲು ರಂಗಮಂದಿರ, ವ್ಯಾಯಾಮ ಶಾಲೆ, ತಿನಿಸುಗಳ ಅಂಗಡಿ ಮತ್ತಿತರ ಸೌಕರ್ಯ ಇಲ್ಲಿವೆ. ಆದರೆ, ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಹಲವು ಸೌಕರ್ಯ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.
ಒಂದು ಕಾಲಕ್ಕೆ ಕನಿಷ್ಠ ಮೂಲಸೌಕರ್ಯವೂ ಇಲ್ಲದೆ ಕಳೆಗುಂದಿದ್ದ ಕಣಬರ್ಗಿ ಕೆರೆಯಂಗಳ ಇಂದು ಕಣ್ಮನ ಸೆಳೆಯುತ್ತಿದೆ. ಆದರೆ, ಬೆಳಗಾವಿ-ಗೋಕಾಕ ಮಾರ್ಗದಲ್ಲಿ ಸಂಚರಿಸುವ ಹಲವರು ಇಲ್ಲಿಯೇ ತ್ಯಾಜ್ಯ ಪದಾರ್ಥ ಎಸೆದು ಹೋಗುತ್ತಿರುವುದರಿಂದ ಕೆರೆಯ ಪರಿಸರ ಮತ್ತೆ ಅಂದಗೆಡುತ್ತಿದೆ. ಕೆಲವೆಡೆ ದುರ್ನಾತ ಬೀರುತ್ತಿದೆ.
ಎರಡು ವರ್ಷಗಳ ಹಿಂದೆ ಹಸ್ತಾಂತರ: 7.4 ಎಕರೆ ಪ್ರದೇಶದಲ್ಲಿರುವ ಕೆರೆಯನ್ನು ₹4.37 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯವರು ಅಭಿವೃದ್ಧಿಪಡಿಸಿದ್ದರು. ನಿರ್ವಹಣೆಗಾಗಿ 2022ರ ಮೇ 17ರಂದು ಮಹಾನಗರ ಪಾಲಿಕೆಗೆ ಇದನ್ನು ಹಸ್ತಾಂತರಿಸಿದ್ದರು. ಆದರೆ, ಇಲ್ಲಿರುವ ತಿನಿಸುಗಳ ನಾಲ್ಕು ಅಂಗಡಿ ಇನ್ನೂ ಆರಂಭವಾಗಿಲ್ಲ. ಗುತ್ತಿಗೆಗೆ ನೀಡಲು ಬೆಳಗಾವಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಸಮಿತಿಯಿಂದ ಒಂದು ಬಾರಿ ಟೆಂಡರ್ ಕರೆದಿದ್ದರೂ, ಯಾರೂ ಪಾಲ್ಗೊಂಡಿಲ್ಲ.
ವಾಯುವಿಹಾರಿಗಳ ತಾಣ: ವಾಯುವಿಹಾರಿಗಳ ಪಾಲಿಗೆ ಈ ಕೆರೆಯಂಗಳ ನೆಚ್ಚಿನ ತಾಣವಾಗಿದೆ. ಕಣಬರ್ಗಿ, ರಾಮತೀರ್ಥ ನಗರ, ಆಟೋ ನಗರದ ನೂರಾರು ನಿವಾಸಿಗಳು ವಾಯುವಿಹಾರಕ್ಕಾಗಿ ಪ್ರತಿದಿನ ಮುಂಜಾವಿನಲ್ಲಿ ಮತ್ತು ಇಳಿಹೊತ್ತಿನಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಮಕ್ಕಳು ಆಟವಾಡುತ್ತಾರೆ. ಮಕ್ಕಳೊಂದಿಗೆ ಯುವಕ-ಯುವತಿಯರು, ಮಹಿಳೆಯರು ವ್ಯಾಯಾಮ ಮಾಡುತ್ತಾರೆ. ಕೆರೆಯ ಒಂದು ಬದಿಗೆ ಜಾನುವಾರುಗಳಿಗೆ ನೀರು ಕುಡಿಸಲು ವ್ಯವಸ್ಥೆ ಮಾಡಲಾಗಿದೆ.
ಆದರೆ, ತಿನಿಸುಗಳ ಅಂಗಡಿ ಆರಂಭವಾಗದಿರುವುದು ಮತ್ತು ತ್ಯಾಜ್ಯ ಪದಾರ್ಥಗಳು ಬೀಳುತ್ತಿರುವ ಕಡೆ ದುರ್ನಾತ ಬೀರುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.