Home / ಅಂತರಾಷ್ಟ್ರೀಯ / ಇಂದು ದೇಶಾದ್ಯಂತ ಜನತಾ ಕರ್ಫ್ಯೂ, ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಸಂಪೂರ್ಣ ಮಾಹಿತಿ

ಇಂದು ದೇಶಾದ್ಯಂತ ಜನತಾ ಕರ್ಫ್ಯೂ, ಎಲ್ಲೆಲ್ಲಿ ಏನೇನಾಯ್ತು..? ಇಲ್ಲಿದೆ ಸಂಪೂರ್ಣ ಮಾಹಿತಿ

Spread the love

ಬೆಂಗಳೂರು : ಮಹಾ ಮಾರಿ ಕೊರೋನಾ ಸೋಂಕು ಹಬ್ಬವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕರೆಕೊಟ್ಟಿದ್ದ ಜನತಾ ಕಪ್ರ್ಯೂ ( ಸ್ವಯಂ ನಿರ್ಬಂಧ) ಗೆ ರಾಜ್ಯದಲ್ಲೆಡೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ಯವಾಗಿದೆ.
ಇಂದು ಬೆಳಗಿನಿಂದಲೇ ಸಾರ್ವಜನಿಕ ಸ್ಥಳಗಳಲ್ಲಿ ಜನಸಂಚಾರವಿಲ್ಲದಂತಾಗಿದೆ. ಜನತಾ ಕರ್ಫ್ಯೂಗೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದೆ.

ರಾಜ್ಯದಲ್ಲಿ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದಾರೆ. ಬೆಳಗ್ಗೆ 7 ಗಂಟೆವರೆಗೆ ಹಾಲು ಮಾರಾಟ ಕೇಂದ್ರ ಹಾಗೂ ಕೆಲ‌ ಅಂಗಡಿಗಳು ಮಾತ್ರ ತೆರೆದಿದ್ದವು. ಉಳಿದಂತೆ ಹೋಟೆಲ್, ಹಣ್ಣು-ತರಕಾರಿ ಮಾರುಕಟ್ಟೆ, ಹೂ ಮಾರಾಟ ಬಂದ್ ಆಗಿದೆ. ಬಸ್ ಸಂಚಾರ ಸಹ ಸ್ಥಗಿತವಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ.

ರಾಜ್ಯದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿದರೆ, ಬೇರೆಲ್ಲಾ ರೀತಿಯ ಸೇವೆಗಲೂ ಸಂಪೂರ್ಣ ಬಂದ್ ಆಗಿವೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕರೆ ನೀಡಿರುವ ಬಂದ್ ಉದ್ದೇಶವನ್ನು ಅರ್ಥ ಮಾಡಿಕೊಂಡ ಜನತೆ ಮನೆಯಿಂದ ಹೊರ ಬರುತ್ತಿಲ್ಲ. ಇಡೀ ದಿನ ಮನೆಯಲ್ಲಿಯೇ ಇರಲು ತೀರ್ಮಾನಿಸಿರುವುದು ಸ್ಪಷ್ಟವಾಗಿದೆ.
ಆಗಾಗ ಕೆಲ ಆಟೊಗಳು ಮಾತ್ರ ಕಾಣಿಸಿಕೊಳ್ಳುತ್ತಿವೆ. ಹಾಲು, ಪತ್ರಿಕೆ, ಹೂ ಖರೀದಿಗೆ ಮನೆಯಿಂದ ಹೊರಗೆ ಬಂದಿದ್ದ ಜನತೆ 7 ಗಂಟೆ ಹೊತ್ತಿಗೆ ಮನೆ ಸೇರಿಕೊಂಡಿದ್ದಾರೆ.

ಸದಾ ಗ್ರಾಹಕರು ಮತ್ತು ವ್ಯಾಪಾರಿಗಳಿಂದ ತುಂಬಿರುತ್ತಿದ್ದ ತರಕಾರಿ ಮಾರುಕಟ್ಟೆ ಜನರಿಲ್ಲದೇ ಬಿಕೋ ಎನ್ನುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ ಅಪರೂಪವಾಗಿದೆ. ಹೋಟೆಲ್, ಟೀ ಅಂಗಡಿ ಯಾವುದೂ ತೆರೆಯದ ಕಾರಣ ಕೆಲವರು ಬೆಳಗ್ಗೆ ಪರದಾಡಿದರು. ಬೆಳಗ್ಗೆನಿಂದಲೇ ಜನರು ಸ್ಬಯಂಪ್ರೇರಿತರಾಗಿ ತಮಗೆ ತಾವೇ ನಿರ್ಬಂಧ ಹಾಕಿಕೊಂಡು ಯಾರೊಬ್ಬರೂ ಮನೆಯಿಂದ ಆಚೆ ಬಾರದೆ ಕೊರೋನಾ ಸೋಂಕು ತಡೆಗಟ್ಟಲು ಪ್ರಧಾನಿ ಅವರ ಜೊತೆ ನಾವು ಇದ್ದೇವೆ ಎಂಬ ಸಂದೇಶವನ್ನು ಸಾರಿದರು.

ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ, ‌ಹಾಸನ, ತುಮಕೂರು ,ಚಿತ್ರದುರ್ಗ,ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ, ಕಲಬುರಗಿ, ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಜನರ ದೈನಂದಿನ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಂಬಗೊಂಡಿದ್ದವು. ಬಹುತೇಕ ಕಡೆ ಜನರು ತಮ್ಮ ಅಗತ್ಯ ವಸ್ತುಗಳನ್ನು ನಿನ್ನೆಯೇ ಖರೀದಿ ಮಾಡಿದ್ದರು. ಇಂದು ಮುಂಜಾನೆ 5 ಗಂಟೆಯೊಳಗೆ ಹಾಲು, ಹಣ್ಣು, ತರಕಾರಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾದ ಔಷಧ, ಹಾಲು, ಪತ್ರಿಕೆ, ಸರ್ಕಾರಿ ಆಸ್ಪತ್ರೆಗಳ ಸೇವೆಗಳು ಲಭ್ಯವಿರಲಿದ್ದು, ಪಟ್ರೋಲ್ ಬಂಕ್ ಗಳು ಎಂದಿನಿಂತೆ ಕಾರ್ಯನಿರ್ವಹಿಸುತ್ತಿವೆ. ಇವಿಷ್ಟು ಬಿಟ್ಟರೆ ರಾಜ್ಯದಲ್ಲಿ ಬೇರಾವುದೇ ಸೇವೆಗಳು ಲಭ್ಯವಿಲ್ಲ. ಎಲ್ಲಾ ರೀತಿಯ ಸಂಸ್ಥೆಗಳು ಹಾಗೂ ಸಂಘಟನೆಗಳು ಈ ಆಂದೋಲನಕ್ಕೆ ಸ್ವಯಂ ಪ್ರೇರಿತವಾಗಿ ಬೆಂಬಲ ವ್ಯಕ್ತರಪಡಿಸಿದ್ದು, ಇಡೀ ರಾಜ್ಯವೇ ಸ್ತಬ್ಧಗೊಂಡಿದೆ.

ಇನ್ನು ಭಾನುವಾರವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಕಚೇರಿಗಳೂ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಬಹುತೇಕ ಖಾಸಗಿ ಕೈಗಾರಿಕೆಗಳು, ಗಾರ್ಮೆಂಟ್ಸ್ ಸೇರಿದಂತೆ ಎಲ್ಲಾ ಕಾರ್ಖಾನೆಗಳೂ ಕೂಡ ಬಂದ್ ಆಗಿದ್ದವು. ಖಾಸಗಿ ಆಸ್ಪತ್ರೆಗಳೂ ಆಂದೋಲನ ಬೆಂಬಲಿಸಿ ಒಪಿಡಿ ಬಂದ್ ಮಾಡುವುದಾಗಿ ಘೋಷಿಸಿವೆ. ಆದರೆ, ತುರ್ತುಸೇವೆಗಳು ಲಭ್ಯವಿರುತ್ತದೆ ಎಂದು ಭಾರತೀಯ ವೈದ್ಯ ಸಂಘದ ರಾಜ್ಯ ಘಟಕ ಮಾಹಿತಿ ನೀಡಿದೆ.

ಇನ್ನು ರಾಜ್ಯದ ಎಲ್ಲೆಡೆ ಕೆಎಸ್ಆರ್’ಟಿಸಿ, ಸಂಚಾರ ಸಂಪೂರ್ಣವಾಗಿ ಬಂದ್ ಆಗಿವೆ. ಖಾಸಗಿ ಬಸ್ಸು,ಆಟೋ, ಟ್ಯಾಕ್ಸಿ, ಕ್ಯಾಬ್ ಮಾಲೀಕರು ಕರ್ಫೂಗೆ ಬೆಂಬಲ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಖಾಸಗಿ ವಾಹನಗಳ ಸಂಚಾರಗಳೂ ಬಂದ್ ಆಗಿವೆ.
ಇದರಂತೆ ಶಾಲಾ, ಕಾಲೇಜುಗಳಿಗೆ ಸರ್ಕಾರವೇ ತಾತ್ಕಾಲಿಕ ಬಂದ್ ಮಾಡಿದೆ. ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಚಿತ್ರಮಂದಿರಗಳು ಕೂಡ ಬಂದ್ ಆಗಿದ್ದವು.

ಇನ್ನು ಬೀದಿ ಬದಿ ವ್ಯಾಪಾರಿಗಳು ಕೂಡ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ್ದು, ವ್ಯಾಪಾರ, ವಹಿವಾಟು ನಡೆಯುತ್ತಿರುವುದು ಎಲ್ಲಿಯೂ ಕಂಡು ಬಂದಿಲ್ಲ. ಸ್ವಯಂ ಪ್ರೇರಿತರಾಗಿ ಮನೆ ಬಿಟ್ಟು ತೆರಳುತ್ತಿಲ್ಲ. ವ್ಯಾಪಾರಸ್ಥರು ಕೂಡ ಅಂಗಡಿ ಮುಂಗಟ್ಟು ಮುಂಚಿದ್ದಾರೆ. ಪ್ರತಿನಿತ್ಯ ಜನಸಂದಣಿಯಿಂದ ತುಂಬಿ ತುಳುಕುತ್ತಿದ್ದ ಸಾಂಸ್ಕೃತಿಕ ನಗರಿ ಮೈಸೂರಿನ ಅರಸು ರಸ್ತೆಗಳಾದ ಸಯ್ಯಾಜೀರಾವ್ ರಸ್ತೆ ಡಿ.ದೇವರಾಜು ಅರಸು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿವೆ. ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ಆಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್ ಸೇವೆ ಸ್ಥಗಿತಗೊಂಡಿದೆ.

ಜನತಾ ಕರ್ಫ್ಯೂ ನಡುವೆಯೂ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದರು . ನಗರದ ಕೆಜಿ ಕೊಪ್ಪಲಿನಲ್ಲಿ ರಾಜು ಎಂಬವರಿಗೆ ಸೇರಿದ ಮಾಂಸದ ಅಂಗಡಿಯನ್ನ ತೆರೆಯಲಾಗಿತ್ತು. ಈ ವೇಳೆ ಅಧಿಕಾರಿಗಳು ಅಂಗಡಿ ಮುಚ್ಚುವಂತೆ ಮನವಿ ಮಾಡಿದರು. ಆದರೂ ಮಾಲೀಕ ರಾಜು ಮನವಿಗೆ ಸ್ಪಂದಿಸದ ಹಿನ್ನೆಲೆ ಅಂಗಡಿಯನ್ನು ವಶಕ್ಕೆ ಪಡೆಯಲಾಗಿದೆ.ಅಲ್ಲದೇ ಮಾಂಸ ತೂಕಕ್ಕೆ ಹಾಕುವ ಯಂತ್ರವನ್ನ ವಶಕ್ಕೆ ಪಡೆಯಲಾಗಿದೆ.
ಸಕ್ಕರೆ ನಾಡು ಮಂಡ್ಯದಲ್ಲಿ ಮನೆಯಿಂದ ಜನರು ಹೊರಬಾರದ ಬೆಂಬಲ ಸೂಚಿಸಿದರು.

ಯಾವುದೇ ರೀತಿಯ ವಾಹನಗಳು ಇಲ್ಲದ ಕಾರಣ, ಮೈ-ಬೆಂ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು.ಬಿಕೋ ಎನ್ನುತ್ತಿರುವ ದೃಶ್ಯಗಳು
ಕಂಡು ಬಂದಿತು. ದೇಶಾದ್ಯಂತ ಜನತಾ ಕರ್ಫ್ಯೂಗೆ ಮೋದಿ ಕರೆ ಹಿನ್ನೆಲೆ ಪೇಡಾನಗರಿ ಧಾರವಾಡ ಜಿಲ್ಲೆಯಲ್ಲಿ ಕರ್ಫ್ಯೂಗೆ ಭಾನುವಾರ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಗರದ ವೃತ್ತ, ಸಿಬಿಟಿ, ಕೋರ್ಟ್ ವೃತ್ತ ಹಾಗೂ ಸುತ್ತಲಿನ ಪ್ರದೇಶಗಳು ಸಂಪೂರ್ಣ ಸ್ತಬ್ಧವಾಗಿವೆ. ಅಗತ್ಯ ಸೇವೆಗಳ ಹೊರತುಪಡಿಸಿ ಎಲ್ಲವೂ ಬಂದ್ ಆಗಿವೆ.

ಆದರೆ ನಗರದ ಸ್ವಚ್ಛತೆಗೆ ಎಂದಿನಂತೆ ಸೇವೆಗಿಳಿದಿರುವ ಪೌರಕಾರ್ಮಿಕರು ವಿವಿಧ ತಂಡ ರಚನೆ ಮಾಡಿಕೊಂಡು ಸ್ವಚ್ಚತಾ ಕಾರ್ಯ ಮಾಡಿದರು. ಜೊತೆಗೆ ನಗರದೆಲ್ಲೆಡೆ ರೋಗನಿಯಂತ್ರಕ ಪೌಡರ್ ಸಿಂಪಡಣೆ ಮಾಡುತ್ತಿದ್ದಾರೆ. ಆಟೋ, ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ನಗರ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಪ್ರಯಾಣಿಕರ ಹಿತದೃಷ್ಟಿಯಿಂದ ಹುಬ್ಬಳ್ಳಿಯಲ್ಲಿ ರೈಲ್ವೆ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ತೆರಳಲು ಎರಡು ಬಸ್ ಗಳನ್ನು ಕಾಯ್ದಿರಿಸಲಾಗಿದೆ.

ಇನ್ನು ಹಳೆ ಬಸ್ ನಿಲ್ದಾಣದಿಂದ ಬೆರಳೆಣಿಕೆ ಬಸ್ ಗಳನ್ನು ಮಾತ್ರ ನಿಲ್ಲಿಸಲಾಗಿದೆ. ತುರ್ತು ಅಗತ್ಯ ದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಸಾರಿಗೆ ಅಧಿಕಾರಿ ಅಶೋಕ ಪಾಟೀಲ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ನಗರಸಭೆ ಪೌರಕಾರ್ಮಿಕರಿಂದ ಸ್ವಚ್ಛತೆ ಕಾರ್ಯ ನಡೆಸಲಾಯಿತು. ರಸ್ತೆ, ಚರಂಡಿ ಸೇರಿ ವಿವಿಧೆಡೆ ಡೆಟ್ಟಾಲ್, ಬ್ಲೀಚಿಂಗ್ ಪೌಡರ್ ಮಿಶ್ರಿತ ನೀರು ಸಿಂಪರಣೆ ಮಾಡಲಾಯಿತು.

ದೇಶದಲ್ಲೇ ಮೊದಲ ಕೊರೊನಾ ಸಾವಿನಿಂದ ತಲ್ಲಣಗೊಂಡಿದ್ದ ಕಲಬುರ್ಗಿ ಭಾನುವಾರ ಸಾಮಾಜಿಕ ಕರ್ಫ್ಯೂಗೆ ಸಂಪೂರ್ಣ ಸ್ತಬ್ಧಗೊಂಡಿದೆ. ಬೆಳಿಗ್ಗೆ ಏಳು ಗಂಟೆಯಿಂದಲೇ ಜನರ ಓಡಾಟ ಸಂಪೂರ್ಣ ನಿಂತು ಹೋಗಿದೆ. ಅಚ್ಚರಿಯ ಸಂಗತಿ ಎಂದರೆ ನಗರದ ಯಾವುದೇ ಮುಖ್ಯರಸ್ತೆ ಅದಕ್ಕೆ ಅಂಟ್ಕೊಂಡ ಪ್ರಮುಖ ರಸ್ತೆ ಮತ್ತು ಓಣಿಗಳ ಒಳಗಿನ ಸಣ್ಣ ಸಣ್ಣ ರಸ್ತೆಗಳಲ್ಲೂ ಕೂಡ ಜನ ಸಂಚಾರ ಸಂಪೂರ್ಣ ನಿಂತು ಹೋಗಿದೆ. ಪ್ರಧಾನಿ ಮೋದಿಯವರು ನೀಡಿದ ಕರೆಗೆ ಭಾನುವಾರ ಏಕ್ದಂ ಕಲಬುರ್ಗಿ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿದಂತೆ ಕಾಣುತ್ತದೆ.

ಬೆಳಗ್ಗೆ ಏಳು ಗಂಟೆಯವರೆಗೆ ಅವಶ್ಯಕ ವಸ್ತುಗಳನ್ನು ಜನರು ತುಂಬಾ ಲಗುಬಗೆಯಿಂದ ಖರೀದಿ ಮಾಡಿ ಏಳು ಗಂಟೆಯ ಹೊತ್ತಿಗೆ ಜನ ಮನೆ ಸೇರಿಕೊಂಡಿದ್ದಾರೆ. ಕರ್ಫ್ಯೂ ಸಂಪೂರ್ಣ ಯಶಸ್ವಿಯಾಗಿದೆ. ಕಳೆದೆರಡು ದಿನಗಳ ಹಿಂದಿನ ಕರ್ಫ್ಯೂ ಪರಿಸರಕ್ಕೂ ಇಂದಿನ ಭಾನುವಾರದ ಕರ್ಫ್ಯೂ ಪರಿಸರಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ಜನರು ಅಭೂತಪೂರ್ವವಾಗಿ ಬೆಂಬಲ ನೀಡಿ ಕೊರೊನಾ ವೈರಸ್ ಹರಡದಂತೆ ನೋಡಿಕೊಳ್ಳುವಲ್ಲಿ ಜಿಲ್ಲಡಳಿತದ ಜೊತೆ ತಾವು ಮುಂದಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ.
ಹಾವೇರಿಯಲ್ಲಿ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಆರೋಗ್ಯ ಸೇವೆ ಮಾತ್ರ ಲಭ್ಯವಿತ್ತು.ಇನ್ನುಹೊಟೇಲ್​ಗಳನ್ನು ತೆರದಿರಲಿಲ್ಲ. ಪ್ರಮುಖವಾಗಿ ಸಾರಿಗೆ ಸಂಚಾರವು ಸಂಪೂರ್ಣ ಸ್ತಬ್ಧವಾಗಿದ್ದು ಸಾರಿಗೆ ಬಸ್, ಆಟೋಗಳು ರಸ್ತೆಗಿಳಿಯಲಿಲ್ಲ.

ತಾಲೂಕು, ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕೆಲ ಪ್ರಯಾಣಿಕರು ಬಸ್, ಆಟೋಗಾಗಿ ಕಾಯುತ್ತಿರುವ ದೃಶ್ಯ ಕಂಡು ಬಂತಾದರೂ, ಕಿಲ್ಲರ್ ಕೊರೋನಾ ವಿರುದ್ಧ ಸಮರ ಸಾರಲು ಹಾವೇರಿ ಜನತೆ ತೊಡೆ ತಟ್ಟಿ ನಿಂತಿದ್ದಾರೆ.
ಇದರ ಜೊತೆ ಹಾವೇರಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಎಲ್ಲವು ಸ್ತಬ್ಧವಾಗಿದೆ.

ಇನ್ನೂ ಕೊಡಗು ಜಿಲ್ಲೆಯಲ್ಲೂ ರಸ್ತೆಗೆ ಇಳಿಯದ ಕೆಎಸ್ಆರ್​ಟಿಸಿ ಬಸ್, ಆಟೋಗಳು. ಸಂಪೂರ್ಣ ಬಂದ್ ಆಗಿದ್ದವು.ಮೆಡಿಕಲ್, ಪೆಟ್ರೋಲ್ ಬಂಕ್ಗಳು ಕೂಡ ಬಂದ್ ಆಗಿವೆ. ಒಟ್ಟಾರೆ ಜನತಾ ಕರ್ಫ್ಯೂಗೆ ಕೊಡಗಿನಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಐತಿಹಾಸಿಕ ಬಾದಾಮಿಯಲ್ಲಿ ರಸ್ತೆಗಳೆಲ್ಲವೂ ಬಿಕೋ ಎನ್ನಿತ್ತವೆ.ವಾಹನಗಳು. ಸ್ವಯಂ ಪ್ರೇರಿತವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ