Breaking News

ಬಾಗಿಲು ಮುಚ್ಚಿದ ಅಟ್ಲಾಸ್ ಸೈಕಲ್ ಕಂಪನಿ – ಸಾವಿರಾರು ನೌಕರರು ಬೀದಿಗೆ

Spread the love

ಲಕ್ನೋ: ಭಾರತದ ಪ್ರಸಿದ್ಧ ಸೈಕಲ್ ತಯಾರಕಾ ಕಂಪನಿಯಾದ ‘ಅಟ್ಲಾಸ್’ ವಿಶ್ವ ಬೈಸಿಕಲ್ ದಿನಾಚರಣೆಯ ದಿನದಂದೇ ದಿಢೀರ್ ಸ್ಥಗಿತಗೊಂಡಿದೆ. ಯಾವುದೇ ಸೂಚನೆ ನೀಡದೇ ಬಾಗಿಲು ಮುಚ್ಚಿದ ಪರಿಣಾಮ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.

ಭಾರೀ ನಷ್ಟದ ಕಾರಣ ಕಂಪನಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಹೇಳಿ ಉತ್ತರ ಪ್ರದೇಶದ ಘಾಝಿಯಾಬಾದ್‍ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಮುಚ್ಚಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಭಾರತದ ಸೈಕಲ್ ತಯಾರಿಕಾ ಕಂಪೆನಿಯ ಅಂತಿಮ ಘಟಕವೂ ಬಾಗಿಲು ಮುಚ್ಚಿದಂತಾಗಿದೆ.

ಕೋವಿಡ್ 19 ಲಾಕ್‍ಡೌನ್ ಘೋಷಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಕಂಪನಿಯನ್ನು ಮುಚ್ಚಲಾಗಿತ್ತು. ಜೂನ್ 1 ರಂದು ಕಂಪನಿಯನ್ನು ತೆರೆಯಲಾಗಿತ್ತು. ನೌಕರರು ಸಂಭ್ರಮದಿಂದಲೇ ಕೆಲಸಕ್ಕೆ ಹಾಜರಾಗಿದ್ದರು. 2 ದಿನ ಕೆಲಸ ಮಾಡಿದ್ದ ನೌಕರರು, ಜೂನ್ 3 ರಂದು ಕೆಲಸಕ್ಕೆ ಬೆಳಗ್ಗೆ ತೆರಳಿದಾಗ ಕಂಪನಿಯ ಮುಖ್ಯ ದ್ವಾರದಲ್ಲಿದ್ದ ನೋಟಿಸ್ ನೋಡಿ ಶಾಕ್ ಆಗಿದ್ದಾರೆ. ಆರ್ಥಿಕ ನಷ್ಟ ಸರಿದೂಗಿಸಲು ಸಾಧ್ಯವಾಗದ ಕಾರಣ ಕಂಪನಿಯನ್ನು ಮುಚ್ಚಲಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿತ್ತು.

 

ಈ ಮೊದಲು 2014ರ ಡಿಸೆಂಬರ್ ವೇಳೆ ಮಧ್ಯಪ್ರದೇಶದ ಮಲಾನ್‍ಪುರ, 2018ರ ಫೆಬ್ರವರಿಯಲ್ಲಿ ಹಯಾರ್ಣದ ಸೋನಿಪತ್ ನಲ್ಲಿದ್ದ  ಘಟಕವನ್ನು ಕಂಪನಿ ಮುಚ್ಚಿತ್ತು. 1989ರಲ್ಲಿ ಆರಂಭವಾದ ಘಾಝಿಯಾಬಾದ್ ಘಟಕ ಅಟ್ಲಾಸ್ ಸಂಸ್ಥೆಯ ಅತ್ಯಂತ ದೊಡ್ಡ ಘಟಕವಾಗಿದ್ದು ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಆರಂಭದಿಂದಲೂ ಇಲ್ಲೇ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಸೈಕಲ್ ಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು.

ನೋಟಿಸ್ ನೀಡದೇ ಕಂಪನಿಯನ್ನು ಮುಚ್ಚಲಾಗಿದೆ. ದಿಢೀರ್ ಬಂದ್ ಮಾಡಿದರೆ ನಾವು ಮುಂದೆ ಏನು ಮಾಡಬೇಕು ಎಂದು ನೌಕರರು ಕಣ್ಣೀರು ಹಾಕಿದ್ದಾರೆ. ನೌಕರರು ಈಗ ಕೋರ್ಟ್ ಮೊರೆ ಹೋಗಿದ್ದು, ಶುಕ್ರವಾರ ಅರ್ಜಿ ವಿಚಾರಣೆಗೆ ಬರಲಿದೆ.

1951ರಲ್ಲಿ ಸೋನಿಪತ್‍ನಲ್ಲಿ ತಗಡಿನ ಚಪ್ಪರದಲ್ಲಿ ಜಾನಕಿದಾಸ್ ಕಪೂರ್ ಅಟ್ಲಾಸ್ ಸೈಕಲ್ ಇಂಡಸ್ಟ್ರೀಸ್ ಲಿ. ನ ಪ್ರಥಮ ಘಟಕವನ್ನು ಸ್ಥಾಪಿಸಿದ್ದರು. ಒಂದು ವರ್ಷದಲ್ಲಿ ಘಟಕ 25 ಎಕರೆಗೆ ವಿಸ್ತಾರಗೊಂಡಿತ್ತು. ಮೊದಲ ವರ್ಷವೇ 12 ಸಾವಿರ ಸೈಕಲ್ ತಯಾರಿಸಿ ಮಾರಾಟ ಮಾಡಿತ್ತು. 1965ರ ವೇಳೆಗೆ ಭಾರತದ ಅತ್ಯಧಿಕ ಸೈಕಲ್ ಉತ್ಪಾದಿಸುವ ಸಂಸ್ಥೆಯೆಂಬ ಹೆಗ್ಗಳಿಕೆ ಪಡೆದಿದ್ದ ಅಟ್ಲಾಸ್ ಕಂಪನಿ 1978ರಲ್ಲಿ ಭಾರತದ ಪ್ರಥಮ ರೇಸಿಂಗ್ ಬೈಸಿಕಲ್ ತಯಾರಿಸಿತ್ತು.


Spread the love

About Laxminews 24x7

Check Also

ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ವರ್ಷಪೂರ್ತಿ ರಾಜ್ಯದೆಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. :C.M.

Spread the love1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಗಾಂಧೀಜಿಯವರ ವಿಚಾರಧಾರೆಯನ್ನು ಪ್ರಚುರಪಡಿಸಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ