ಸುರಪುರ: ಹೆಚ್.ವಿಶ್ವನಾಥ ಅವರ ರಾಜಕೀಯ ಭವಿಷ್ಯ ಮುಂದೆ ಉಜ್ವಲವಾಗಲಿದೆ. ವಿಶ್ವನಾಥ ಅವರಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ ಎಂದು ನೀರಾವರಿ ಮಂತ್ರಿ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ನಗರದ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಹೆಚ್.ವಿಶ್ವನಾಥ ಅವರು ಮುಂದೆ ವಿಧಾನ ಪರಿಷತ್ ಸದಸ್ಯರಾಗಲಿದ್ದಾರೆ. ಅವರ ರಾಜಕೀಯ ಭವಿಷ್ಯ ಮುಂದೆ ಹೇಗಾಗಲಿದೆ ಎಂದು ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.
ಸುರಪುರ ನಗರದ ಜನತೆಗೆ ಕುಡಿಯುವ ನೀರಿನ ಅನುಕೂಲ ಸೇರಿ ಜನರಿಗಾಗಿ ಸುಮಾರು 300 ಕೋಟಿ ಅಂದಾಜು ಮೊತ್ತದಲ್ಲಿ ಬ್ರೀಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಗೊಳಿಸಲಾಗಿದೆ. ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮೊದಲ ಬಾರಿಗೆ ಸಚಿವರಾಗಿ ಸುರಪುರ ನಗರಕ್ಕೆ ಭೇಟಿ ನೀಡಿದ ಸಚಿವರಿಗೆ ಶಾಸಕರ ನಿವಾಸದಲ್ಲಿ ಸನ್ಮಾನಿಸಿ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ನರಸಿಂಹ ನಾಯಕ (ರಾಜುಗೌಡ),ಜೇವರ್ಗಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳಿ,ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲ ರಡ್ಡಿ,ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ),ಮುಖಂಡರಾದ ದೊಡ್ಡ ದೇಸಾಯಿ,ಭೀಮಣ್ಣ ಬೇವಿನಾಳ,ಬಸನಗೌಡ ಹಳ್ಳಿಕೋಟಿ,ನರಸಿಂಹಕಾಂತ ಪಂಚಮಗಿರಿ,ಹೆಚ್.ಸಿ.ಪಾಟೀಲ್,ಶಂಕರ ನಾಯಕ,ಶ್ರೀನಿವಾಸ ನಾಯಕ ದರಬಾರಿ,ಈಶ್ವರ ನಾಯಕ ಸೇರಿದಂತೆ ಅನೇಕರಿದ್ದರು.