ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾದ ಬಳಿಕ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನಿಸುತ್ತಲೇ ಬಂದಿದ್ದಾರೆ. ಇದಕ್ಕೆ ಸಾನಿಯ ಕೂಡ ತಕ್ಕ ಉತ್ತರವನ್ನೇ ನೀಡುತ್ತಾ ಇದ್ದಾರೆ. 10 ವರ್ಷಗಳ ಹಿಂದೆ ಇವರಿಬ್ಬರು ವಿವಾಹವಾಗಿದ್ದರೂ ಈಗಲೂ ಎರಡೂ ದೇಶಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತದೆ. ಸದ್ಯ ಈ ಕುರಿತು ಮಾತನಾಡಿರುವ ಮಲಿಕ್, ನಾನು ಸಾನಿಯಾ ಮದುವೆಯಾಗಲು ನಿರ್ಧರಿಸಿದಾಗ ಮೊದಲು ಪ್ರೀತಿಯನ್ನು ನೋಡಿದೆವು, ರಾಷ್ಟ್ರೀಯತೆಯಲ್ಲ ಎಂದು ಹೇಳಿದ್ದಾರೆ. ತಮ್ಮ ಮದುವೆ ವಿಚಾರವಾಗಿ ಪಾಕ್ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಮಲಿಕ್, ‘ನಾವು ಮದುವೆಯಾಗುವಾಗ ನಮ್ಮ ಬಾಳ ಸಂಗಾತಿ ಎಲ್ಲಿಯವಳು. ಎರಡು ದೇಶಗಳ ಮಧ್ಯೆ ಏನು ನಡೆಯುತ್ತಿದೆ, ದೇಶಗಳ ಸಂಬಂಧ, ರಾಜಕೀಯ ಮುಖ್ಯವಾಗುವುದಿಲ್ಲ. ಬದಲಿಗೆ ನೀವು ಯಾವ ದೇಶ ಎಂಬುದಕ್ಕಿಂತ ಇಷ್ಟಪಟ್ಟವರನ್ನು ಮದುವೆಯಾಗುವುದು ಮುಖ್ಯವಾಗುತ್ತದೆ’ ಎಂದು ಮಲಿಕ್ ತಿಳಿಸಿದ್ದಾರೆ. ‘ನನಗೆ ಬಹಳಷ್ಟು ಸ್ನೇಹಿತರು ಭಾರತೀಯರಾಗಿದ್ದಾರೆ ಮತ್ತು ಉಭಯ ದೇಶಗಳ ನಡುವಿನ ಸಂಬಂಧದಿಂದಾಗಿ ನಾನು ಅವರೊಂದಿಗೆ ಎಂದಿಗೂ ಒತ್ತಡವನ್ನು ಅನುಭವಿಸಲಿಲ್ಲ. ಪ್ರಮುಖವಾಗಿ ನಾನೊಬ್ಬ ಕ್ರಿಕೆಟಿಗ,
ರಾಜಕಾರಣಿಯಲ್ಲ’ ಎಂಬುದು ಮಲಿಕ್ ಮಾತು. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2008 ಏಪ್ರಿಲ್ 12ರಂದು ಹೈದರಾಬಾದಿನ ತಾಜ್ ಕೃಷ್ಣ ಹೋಟೆಲ್‍ನಲ್ಲಿ ವಿವಾಹವಾಗಿದ್ದರು. ವಿವಾಹದ ನಂತರವೂ ಸಾನಿಯಾ ಮಿರ್ಜಾ ಭಾರತದ ಪರ ಆಡಿದರೆ, ಮಲಿಕ್ ಪಾಕಿಸ್ತಾನದ ಪರವಾಗಿ ಆಡುತ್ತಿದ್ದಾರೆ. ಶೋಯೆಬ್ ಮಲಿಕ್ ಲಾಕ್ಡೌನ್ ಹಿನ್ನೆಲೆಯಲ್ಲಿ ಪತ್ನಿ ಮತ್ತು ಪುತ್ರನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಸಾನಿಯಾ ಹೈದರಾಬಾದ್ನಲ್ಲಿದ್ದರೆ ಮಲಿಕ್ ಪಾಕಿಸ್ತಾನದ ಸಿಯಾಲ್ಕೋಟ್ನದಲ್ಲಿದ್ದಾರೆ. ಈಗ ಲಾಕಡೌನ್ ಸಡಿಲವಾಗಿದ್ದು ಐದು ತಿಂಗಳ ಬಳಿಕ ಪತ್ನಿ ಪುತ್ರನ ಭೇಟಿಗೆ ಅವಕಾಶ ದೊರೆತಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಶೋಯೆಬ್ ಮಲಿಕ್ಗೆ ವಿಶೇಷ ಅನುಮತಿಯನ್ನು ಪಿಸಿಬಿ ನೀಡಿದೆ.