ಬೆಂಗಳೂರು (ಜು. 3): ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸಂಪರ್ಕದಲ್ಲಿದ್ದವರು ಕ್ವಾರಂಟೈನ್ ಆಗಬೇಕೆಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆಡಳಿತವನ್ನು ನೋಡಿಕೊಳ್ಳುವವರು ಯಾರು? ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾರದ ರೊಟೀನ್ ಚೆಕಪ್ ವೇಳೆ ನಿನ್ನೆ ಸಿಎಂಗೆ ಕೊರೋನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಹೀಗಾಗಿ, ರಾತ್ರೋರಾತ್ರಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಿದ್ದ ಸಿಎಂ ಯಡಿಯೂರಪ್ಪ, ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಅಶ್ವಥ್ ನಾರಾಯಣ ಅವರನ್ನೂ ಭೇಟಿಯಾಗಿದ್ದರು. ಹೀಗಾಗಿ, ಮೂರು ದಿನಗಳಿಂದ ಸಿಎಂ ಸಂಪರ್ಕದಲ್ಲಿದ್ದ ಡಿಸಿಎಂ, ಗೃಹ ಸಚಿವರು ಸೇರಿದಂತೆ ಹಲವರು ಕ್ವಾರಂಟೈನ್ ಆಗುವ ಸಾಧ್ಯತೆಯಿದೆ. ಹೀಗಾಗಿ, ರಾಜ್ಯದ ಆಡಳಿತದ ಕಡೆ ಗಮನ ಕೊಡೋರು ಯಾರು? ಎಂಬ ಬಗ್ಗೆ ಗೊಂದಲ ಮೂಡಿದೆ.ಇನ್ನು, ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಯಡಿಯೂರಪ್ಪನವರ ಆರೋಗ್ಯ ಸ್ಥಿರವಾಗಿದೆ. ಕೊರೋನಾ ಪಾಸಿಟಿವ್ ಬಂದಿದ್ದರೂ ಯಾವುದೇ ರೋಗಲಕ್ಷಣಗಳಿಲ್ಲದ ಕಾರಣ ಆರೋಗ್ಯದ ಬಗ್ಗೆ ಹೆಚ್ಚಿನ ಆತಂಕ ಪಡಬೇಕಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಸಿಎಂ ಆರೋಗ್ಯದ ಮೇಲೆ ನಿಗಾ ವಹಿಸಲು ವೈದ್ಯರ ವಿಶೇಷ ತಂಡವನ್ನು ರಚಿಸಲಾಗಿದೆ. ಬಿ.ಎಸ್. ಯಡಿಯೂರಪ್ಪನವರಿಗೆ ಯಾವುದೇ ಗಂಭೀರ ಸಮಸ್ಯೆಗಳು ಇಲ್ಲದ ಕಾರಣ ವಿಶೇಷ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ತಂದೆ ಕೂಡ ಮಣಿಪಾಲ್ ಆಸ್ಪತ್ರೆಯಲ್ಲೇ ದಾಖಲಾಗಿ, ಬೇಗ ಗುಣಮುಖರಾಗಿದ್ದರಿಂದ ಅವರ ಸಲಹೆಯ ಮೇರೆಗೆ ಸಿಎಂ ಯಡಿಯೂರಪ್ಪನವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಎಂ ಆರೋಗ್ಯದ ಸ್ಥಿತಿಗತಿ ಬಗ್ಗೆ ಪ್ರತಿ 2 ಗಂಟೆಗಳಿಗೊಮ್ಮೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಲು ಮಣಿಪಾಲ್ ಆಸ್ಪತ್ರೆ ನಿರ್ಧರಿಸಿದೆ.