ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಕಾರ್ಖಾನೆಯೊಂದರಲ್ಲಿ ಮತ್ತೆ ಗ್ಯಾಸ್ ಲೀಕ್ ಆಗಿದ್ದು, ಈ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ನಾಲ್ವರು ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತೀಚೆಗಷ್ಟೇ ವಿಶಾಖಪಟ್ಟಣಂನ ಆರ್.ಆರ್ ವೆಂಕಟಪುರಂನಲ್ಲಿರುವ ಬಹುರಾಷ್ಟ್ರೀಯ ಕಂಪನಿ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ಸೋರಿಕೆಯಾಗಿತ್ತು. ಈಗ ಮತ್ತೆ ಇದೇ ವಿಶಾಖಪಟ್ಟಣಂನ ಸೈನರ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಿಂದ ಬೆಂಜಿಮಿಡಾಜೋಲ್ ಅನಿಲ ಸೋರಿಕೆಯಾಗಿದೆ ಎಂದು ರಾಷ್ಟೀಯ ಮಾಧ್ಯಮಗಳು ವರದಿ ಮಾಡಿವೆ.ಈ ವಿಚಾರವಾಗಿ ಮಾತನಾಡಿರುವ ಪರ್ವಾಡಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಉದಯ್ ಕುಮಾರ್, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಇಬ್ಬರು ಕಾರ್ಮಿಕರು ಅನಿಲ ಸೋರಿಕೆಯಾದ ಸಮಯದಲ್ಲಿ ಕಾರ್ಖಾನೆಯಲ್ಲೇ ಇದ್ದರಿಂದ ಅವರು ಸಾವನ್ನಪ್ಪಿದ್ದಾರೆ. ನಾಲ್ವರು ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ. ಕಾರ್ಖಾನೆಯಿಂದ ಸೋರಿಕೆಯಾದ ಅನಿಲ ಬೇರೆಲ್ಲಿಯೂ ಹರಡಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಮೇ 7ರಂದು ಪಾಲಿಸ್ಟೈರೀನ್ ಉತ್ಪನ್ನಗಳನ್ನು ತಯಾರಿಸುವ ದಕ್ಷಿಣ ಕೊರಿಯಾದ ಒಡೆತನದ ಕಾರ್ಖಾನೆಯ ಎಲ್‍ಜಿ ಪಾಲಿಮರ್ಸ್ ಇಂಡಿಯಾ ಲಿಮಿಟೆಡ್‍ನಲ್ಲಿ ಅನಿಲ ಸೋರಿಕೆಯಿಂದ 13 ಜನರು ಸಾವನ್ನಪ್ಪಿದರು. ಸುಮಾರು 10 ಸಾವಿರ ಟನ್ ಅನಿಲ ಸೋರಿಕೆಯಾದ ಕಾರಣ ಈ ಅನಿಲ ಗಾಲಿಯಲ್ಲಿ ಸೇರಿ ಅಕ್ಕಪಕ್ಕದ ಊರುಗಳಿಗೂ ಹರಡಿತ್ತು. ಈ ಪರಿಣಾಮ ನೂರಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು.