ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ಆಚೆಗೆ ಸರಿ -ತಪ್ಪುಗಳ ವಾದ ಪ್ರತಿವಾದ ನಡೆದಿದ್ದು, ವಿರೋಧ ಪಕ್ಷಗಳಿಂದ ಸಿಡಿ ಪ್ರಕರಣಕ್ಕೆ ವಿರೋಧ ವ್ಯಕ್ತವಾದರೆ, ರಮೇಶ್ ಬೆಂಬಲಿಗರು ಇದು ನಕಲಿ ಎಂದು ರಸ್ತೆಗಿಳಿದಿದ್ದಾರೆ. ಇದೆಲ್ಲಾ ಒಂದು ತೂಕವಾದರೆ ರಮೇಶ್ ಜಾರಕಿಹೊಳಿ ಸಹೋದರರು ರಮೇಶ್ ಬೆನ್ನಿಗೆ ನಿಂತಿದ್ದಾರೆ ಎನ್ನುವುದು ವಿಶೇಷ.
ರಮೇಶಣ್ಣ ಇದರಿಂದ ಗೆದ್ದು ಬರುತ್ತಾರೆ
ಇದು ರಾಜಕೀಯ ಷಡ್ಯಂತ್ರ. ರಮೇಶ್ರನ್ನು ರಾಜಕೀಯವಾಗಿ ಮುಗಿಸಲು ಈ ರೀತಿ ಫೇಕ್ ಸಿಡಿ ಮಾಡಲಾಗಿದೆ. ರಾಜಕೀಯವಾಗಿ ಬೆಳೆದ ಅವರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ಇದರಲ್ಲಿ ವಿರೋಧಿಗಳು ಯಶಸ್ವಿಯಾಗುವುದಿಲ್ಲ. ರಮೇಶಣ್ಣ ಇದರಿಂದ ಗೆದ್ದು ಬರುತ್ತಾರೆ ಎಂದು ರಮೆಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿಗೆ ಕ್ಷೇತ್ರದಾದ್ಯಂತ ರಮೇಶ್ ಅಣ್ಣ ಎಂದು ಕರೆಯುತ್ತಾರೆ. ಅವರು ಹೀಗೆ ಮಾಡುತ್ತಾರೆ ಎಂದು ಯಾರಿಗೂ ಅನಿಸುವುದಿಲ್ಲ. ರಮೇಶಣ್ಣನನ್ನು ಕ್ಷೇತ್ರದ ಜನ ಬಿಟ್ಟುಕೊಡುವುದಕ್ಕೆ ತಯಾರಿಲ್ಲ ಹಾಗೂ ಕ್ಷೇತ್ರದ ಜನ ಇದನ್ನು ನಂಬಲೂ ಸಾಧ್ಯವಿಲ್ಲ. ಮೊದಲಿಂದಲೂ ಜಾರಕಿಹೊಳಿ ಸಹೋದರರು ಎಲ್ಲರ ಜೊತೆಗೆ ಒಂದಾಗಿ ಹೋಗುತ್ತಿದ್ದೇವೆ ಎಂದು ಲಖನ್ ಜಾರಕಿಹೊಳಿ ತಿಳಿಸಿದ್ದಾರೆ.
ಜನರನ್ನು ನಾವು ಸರಿ ಸಮನಾಗಿ ನೋಡಿಕೊಂಡು ಸಾಗುತ್ತಿದ್ದೇವೆ. ಇದು ಕೆಲವೇ ದಿನಗಳ ಕಹಿ ಘಟನೆ ಮತ್ತೆ ರಮೇಶ ಅಣ್ಣನಿಗೆ ಒಳ್ಳೆಯ ದಿನಗಳು ಬರುತ್ತವೆ. ಈ ಸಿಡಿ ವಿಚಾರದಿಂದಾಗಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ ಮೋಡ ಹೋದ ಮೇಲೆ ಬೆಳದಿಂಗಳು ಬಂದೆ ಬರುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿ ಕೆಲಸ ಮಾಡಿವೆ. ನಾನು ಅವರ ಬೆಂಬಲಕ್ಕಿದ್ದಿನಿ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಈ ವಿಚಾರವಾಗಿ ರಮೇಶ್ ಜಾರಕಿಹೊಳಿ ಸಹೊದರ ಬಾಲಚಂದ್ರ ಮೊದಲು ಮಾತನಾಡಿದ್ದು ಈ ಸಿಡಿ ಫೇಕ್, ಇದೊಂದು ಸೃಷ್ಟಿ ಮಾಡಿರುವಂತಹ ನಕಲಿ ಸಿಡಿಯಾಗಿದೆ. ಸಿಬಿಐ ತನಿಖೆಗೆ ನೀಡುವಂತೆ ಮುಖ್ಯಮಂತ್ರಿಗೆ ಒತ್ತಾಯ ಮಾಡಿದ್ದೇನೆ. ರಮೇಶ್ ಜಾರಕಿಹೊಳಿ ತಪ್ಪು ಮಾಡಿದ್ದರೆ ಕ್ಷಮೆ ಕೇಳಬೇಕು ಮತ್ತು ರಾಜೀನಾಮೆ ನೀಡಬೇಕು ಆದರೆ ಅವರು ತಪ್ಪು ಮಾಡಿಲ್ಲ ಹೀಗಾಗಿ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದರು.
ಇದು ದುಬೈ, ರಷ್ಯಾ, ಸಿಂಗಾಪುರದಿಂದ ಅಪ್‌ಲೋಡ್ ಆಗಿರುವಂತಹ ವಿಡಿಯೋ ಆಗಿದೆ. ಹೀಗಾಗಿ ಸಿಡಿ ಬಗ್ಗೆ ಸಿಐಡಿ ಅಥವಾ ಸಿಬಿಐ ತನಿಖೆಯಾಗಲಿ. ಈ ರೀತಿ ಮಾಡಿದವರ ವಿರುದ್ಧ100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ. ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿಯೇ ಇದ್ದಾರೆ. ನಕಲಿ ಸಿಡಿಗಾಗಿ ರಾಜೀನಾಮೆ ಕೊಟ್ಟರೆ ಸಂಪುಟವೇ ಇರುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಆರಂಭದಲ್ಲಿಯೇ ಹೇಳಿದ್ದರು.