ಹುಬ್ಬಳ್ಳಿ/ಚಿಕ್ಕಮಗಳೂರು: ತವರು ಮನೆಯಿಂದ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಮಾವನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಗೌಶಿಯಾ ಟೌನ್ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ.
ಅಹ್ಮದ್ ರಜಾಕ್ ಶಹಪೂರ್ (48) ಮೃತ ದುರ್ದೈವಿ. ಇವರು ಹಳೆ ಹುಬ್ಬಳ್ಳಿ ನಿವಾಸಿಯಾಗಿದ್ದು, ಖಾಸಗಿ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆರೋಪಿಯನ್ನು ಸದ್ದಾಂ ಎಂದು ಗುರುತಿಸಲಾಗಿದೆ. ಈತ ಮೃತ ಅಹ್ಮದ್ ರಜಾಕ್ ಅವರ ಸಹೋದರನ ಮಗಳ ಪತಿ ಎಂದು ತಿಳಿದು ಬಂದಿದೆ.
ಸದ್ದಾಂ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ರಾತ್ರಿ ವೇಳೆ ಮನೆಗೆ ಬಂದು ಜಗಳ ಮಾಡುತ್ತಿದ್ದನು. ಈ ವೇಳೆ, ಅಹ್ಮದ್ ರಜಾಕ್ ಅವರು ಮಧ್ಯ ಪ್ರವೇಶಿಸಿ ಬುದ್ಧಿಮಾತು ಹೇಳಲು ಮುಂದಾದಾಗ, ಕೋಪದಲ್ಲಿ ಸದ್ದಾಂ ಕಲ್ಲಿನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಗಾಯಗೊಂಡ ಅಹ್ಮದ್ ರಜಾಕ್ ಅವರನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಕಸಬಾಪೇಟೆ ಪೊಲೀಸರು ತಿಳಿಸಿದ್ದಾರೆ.
Laxmi News 24×7