ಪುತ್ತೂರು(ದಕ್ಷಿಣ ಕನ್ನಡ): ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು 106 ಕೆ.ಜಿ ಗಾಂಜಾ ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಬೆಳ್ತಂಗಡಿಯ ಚಾರ್ಮಾಡಿ ಗ್ರಾಮದ ನಿವಾಸಿಗಳಾದ ರಫೀಕ್ ಪಿ(37), ಅಬ್ದುಲ್ ಸಾದಿಕ್ (37) ಬಂಧಿತರು.
ಜ.19ರ ಸಂಜೆ ಕಾರು ಮತ್ತು ಅಶೋಕ್ ಲೈಲ್ಯಾಂಡ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರು, ಸಿಬ್ಬಂದಿಗಳೊಂದಿಗೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಎಂಬಲ್ಲಿ ಕಾರು ಹಾಗೂ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ನಿಲ್ಲಿಸಿದ್ದು, ಕಾರಿನ ಚಾಲಕನನ್ನು ವಿಚಾರಿಸಿದಾಗ ಆತ ಬೆಳ್ತಂಗಡಿಯ ಚಾರ್ಮಾಡಿ ಗ್ರಾಮದ ನಿವಾಸಿ ರಫೀಕ್ ಪಿ(37) ಎಂಬುದಾಗಿ ತಿಳಿದು ಬಂದಿದೆ. ಆತನ ವರ್ತನೆಯಿಂದ ಸಂಶಯಗೊಂಡು ಕಾರನ್ನು ತಪಾಸಣೆ ನಡೆಸಿದಾಗ ಪ್ಲಾಸ್ಟಿಕ್ ಕವರ್ನಲ್ಲಿ ಸುಮಾರು 100 ಗ್ರಾಂ ತೂಕವಿರುವ ಗಾಂಜಾ ಗಿಡದ ಎಲೆಗಳಂತೆ ಇದ್ದ ಸೊಪ್ಪು, ಹೂ, ಕಾಯಿ ತುಂಬಿಸಿ ಇದ್ದ ಕಟ್ಟು ಪತ್ತೆಯಾಗಿದೆ.![]()
ಆ ಬಳಿಕ ಗೂಡ್ಸ್ ವಾಹನದ ಚಾಲಕನ ಬಳಿ ವಿಚಾರಿಸಿದಾಗ ಆತನು ಬೆಳ್ತಂಗಡಿಯ ಚಾರ್ಮಾಡಿ ಗ್ರಾಮದ ನಿವಾಸಿ ಅಬ್ದುಲ್ ಸಾದಿಕ್ (37) ಎಂಬುದಾಗಿ ತಿಳಿಸಿದ್ದು, ಆತನ ವಾಹನ ಪರಿಶೀಲಿಸಿದಾಗ ವಾಹನದಲ್ಲಿ 106 ಕಿಲೋ ಗ್ರಾಂ ಮತ್ತು 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿರುತ್ತದೆ. ಇದರ ಮೌಲ್ಯ 53,03,000 ರೂ ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಚಾಲಕನಲ್ಲಿ ವಿಚಾರಿಸಿದಾಗ ಗಾಂಜಾ ಸೊಪ್ಪುಗಳನ್ನು ಕೇರಳ ಹಾಗೂ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಗಾಂಜಾ ಸಾಗಣೆಗೆ ಬಳಸಿದ ವಾಹನಗಳನ್ನು ಹಾಗೂ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.
Laxmi News 24×7