ಬಾಗಲಕೋಟೆ: ಬಾದಾಮಿ ಕ್ಷೇತ್ರಕ್ಕೆ ಕಳೆದೆರಡು ವರ್ಷಗಳಲ್ಲಿ 2,000 ಕೋಟಿ ರೂ. ಅನುದಾನ ನೀಡಲಾಗಿದೆ. ಬಾದಾಮಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬಾಗಲಕೋಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೋಮವಾರ ಬಾದಾಮಿಯ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಚಾಲುಕ್ಯ ಉತ್ಸವ -2026 ಉದ್ಘಾಟಿಸಿ ಸಿಎಂ ಮಾತನಾಡಿದರು.![]()
ಚಾಲುಕ್ಯರು ನಿರ್ಮಿಸಿದ ದೇಗುಲಗಳ ವಾಸ್ತುಶಿಲ್ಪದ ಮಹತ್ವ ಅರಿಯುವ ಉದ್ದೇಶವನ್ನು ಚಾಲುಕ್ಯ ಉತ್ಸವ ಹೊಂದಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳ ವೈಭವವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನರು ಬರುತ್ತಾರೆ. ಚಾಲುಕ್ಯರ ಆಡಳಿತ ವೈಖರಿಯಂತೆ ನಮ್ಮ ಸರ್ಕಾರವೂ ಸರ್ವಧರ್ಮಗಳ ಸಮನ್ವಯತೆಯನ್ನು ಪಾಲಿಸುತ್ತದೆ. ನಾನು ಮುಖ್ಯಮಂತ್ರಿಯಾಗಿ ಈ ಎರಡು ವರ್ಷದಲ್ಲಿ ಬಾದಾಮಿ ಕ್ಷೇತ್ರಕ್ಕೆ ಸುಮಾರು 2 ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದೇನೆ. 1400 ಕೋಟಿ ರೂ.ಗಳ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೇ 400 ಕೋಟಿ ರೂ.ಗಳಲ್ಲಿ ಬಾದಾಮಿಗೆ ಕುಡಿಯುವ ನೀರಿನ ಯೋಜನೆ, 50 ಕೋಟಿ ರೂ.ಗಳಲ್ಲಿ ರಸ್ತೆ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ನಮ್ಮ ಪ್ರಣಾಳಿಕೆಯಲ್ಲಿ 590 ಭರವಸೆಗಳಲ್ಲಿ 240 ಈಡೇರಿಸಲಾಗಿದ್ದು, 5 ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಬಾದಾಮಿ ಕ್ಷೇತ್ರದ ಜನರ ಉಪಕಾರ ಎಂದೂ ಮರೆಯುವುದಿಲ್ಲ: ಐದು ವರ್ಷಗಳ ಕಾಲ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೆ. 2018ರಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಐದು ಬಾರಿ ಗೆದ್ದಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲಾಯಿತು. ಆದರೆ ಬಾದಾಮಿ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿದ್ದರು ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ. ಬಾದಾಮಿ ಕ್ಷೇತ್ರಕ್ಕೆ ಬಂದು ಎರಡು ಅಥವಾ ಮೂರು ಬಾರಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿ ಜನರ ಆಶೀರ್ವಾದ ಬೇಡಿರಬಹುದು. ಇಲ್ಲಿನ ಜನರು ದೊಡ್ಡ ಮನಸ್ಸು ಮಾಡಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದರು. ಬಳಿಕ ವರುಣಾ ಕ್ಷೇತ್ರದಲ್ಲಿ ಗೆದ್ದು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎನ್ನುವುದನ್ನು ಮರೆಯಲಾಗುವುದಿಲ್ಲ. ನಿಮ್ಮ ಉಪಕಾರವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
Laxmi News 24×7