ಹೈದರಾಬಾದ್: ಲಾಡ್ಜ್‌ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಯುವಕ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ತೆಲಂಗಾಣದ ಮೆಡ್ಚಲ್-ಮಲ್ಕಾಜ್ಗಿರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೆಡಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲಾಡ್ಜ್‌ನಲ್ಲಿ ಕೀಟನಾಶಕವನ್ನು ಕುಡಿದು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಘಟನೆಯಲ್ಲಿ ಯುವತಿ ಶ್ರಾವಣಿ ಸ್ಥಳದಲ್ಲೇ ಮೃತಪಟ್ಟಿದ್ದು, ಗೆಳೆಯ ಅಜಯ್ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ
ಶ್ರಾವಣಿ ಮತ್ತು ಅಜಯ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಮಂಗಳವಾರ ಇಬ್ಬರು ಮಡಿಪಲ್ಲಿಯಲ್ಲಿರುವ ಲಾಡ್ಜ್‌ಗೆ ಬಂದು ರೂಮ್ ಬುಕ್ ಮಾಡಿದ್ದಾರೆ. ಆದರೆ ಮಂಗಳವಾರ ರಾತ್ರಿ ರೂಮಿಗೆ ಹೋಗಿ ಲಾಕ್ ಮಾಡಿಕೊಂಡವರು ಇಂದು ಬೆಳಗ್ಗೆ ತುಂಬಾ ಸಮಯವಾದರೂ ರೂಮಿನಿಂದ ಹೊರಗೆ ಬರಲಿಲ್ಲ. ಇದರಿಂದ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ರೂಮಿನ ಬಾಗಿಲು ತೆಗೆದು ನೋಡಿದ್ದಾರೆ. ಆಗ ಪ್ರೇಮಿಗಳಿಬ್ಬರು ಹಾಸಿಗೆಯ ಮೇಲೆ ಮಲಗಿದ್ದರು.
ತಕ್ಷಣ ಲಾಡ್ಜ್ ಸಿಬ್ಬಂದಿ ಮಡಿಪಲ್ಲಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಆಗ ಶ್ರಾವಣಿ ಮೃತಪಟ್ಟಿದ್ದಳು. ಆದರೆ ಅಜಯ್ ಇನ್ನೂ ಉಡಿರಾಡುತ್ತಿದ್ದನು. ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆಯೇ? ಅಥವಾ ಅಜಯ್ ತನ್ನ ಗೆಳತಿಯನ್ನು ಕೊಂದು ಕೀಟನಾಶಕವನ್ನು ಕುಡಿದಿದ್ದಾನೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರೇಮಿಗಳಿಬ್ಬರು ಲಾಡ್ಜ್‍ಗೆ ಹೋಗಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗಿದೆ. ಅಜಯ್ ಚೇತರಿಸಿಕೊಂಡರೆ ರೂಮಿನಲ್ಲಿ ಏನಾಯಿತು ಎಂಬುದು ಸ್ಪಷ್ಟವಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.