ಚಿಕ್ಕೋಡಿ (ಬೆಳಗಾವಿ) : ಶಾಸಕ ಲಕ್ಷ್ಮಣ್ ಸವದಿ ಅವರು ಬಿಜೆಪಿ ಪಕ್ಷ ಸೇರುವುದಕ್ಕೆ ಹಾದಿ ಸುಲಭ ಮಾಡಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿ, ಬೆಂಗಳೂರು, ದೆಹಲಿ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸುಳಿ ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು, ‘ನಮ್ಮ ಶಾಸಕರು ಬಿಜೆಪಿ ಪಕ್ಷ ಸೇರುವುದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಎಂಟರಿಂದ ಒಂಬತ್ತು ಸಾವಿರ ಮತ ಲೀಡ್ ಬರುವಂತೆ ಮಾಡಿದರು. ನಾವು ವಿಧಾನಸಭಾ ಚುನಾವಣೆಯಲ್ಲಿ ಸವದಿ ಅವರನ್ನು 78 ಸಾವಿರ ಮತಗಳ ಅಂತರದಿಂದ ಆಯ್ಕೆ ಮಾಡಿ ಕೊಟ್ಟಿದ್ದೆವು. ಆದರೆ, ಲೋಕಸಭಾ ಚುನಾವಣೆಯಲ್ಲಿ ಎಲ್ಲವೂ ಕಳೆದು ಬಿಜೆಪಿ ಲೀಡ್ ಆಗಿದೆ, ಸದ್ಯಕ್ಕೆ ಜನರು ಸವದಿ ಬಿಜೆಪಿ ಸೇರುವುದಕ್ಕೆ ತಯಾರಿ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ ಎಂದು ಹೇಳಿರುವ ಅವರು ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.
ಕಳೆದ 30 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇನೆ. 2019 ರಲ್ಲಿ ಬಿಜೆಪಿ ಸರ್ಕಾರವೇ ನನ್ನ ವಿರುದ್ಧ ಸ್ಪರ್ಧೆಗಿಳಿದಿದ್ದರೂ ಉಪಚುನಾವಣೆಯಲ್ಲಿ ಅರವತ್ತು ಸಾವಿರ ಮತಗಳನ್ನು ಪಡೆದು ಅಥಣಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿದ್ದೇವೆ. ಆದರೆ, 2023ರ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್ ಪಕ್ಷಕ್ಕೆ ಅನಿರೀಕ್ಷಿತವಾಗಿ ಬಂದು ನಮ್ಮ ಪಕ್ಷ ಸಂಘಟನೆಗೆ ಬೆಲೆ ಇಲ್ಲದಂತಾಗಿದೆ. ನಾನು ಕಾಂಗ್ರೆಸ್ ಹೈಕಮಾಂಡಿಗೆ ಹೇಳುವುದೇನೆಂದರೆ, ಸದ್ಯಕ್ಕೆ ನನಗೆ ನಿಗಮ ಸ್ಥಾನವಾದರೂ ನೀಡಿ, ಇಲ್ಲವಾದರೆ ಬರುವ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬಿ ಫಾರ್ಮ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಶಾಸಕ ಲಕ್ಷ್ಮಣ್ ಸವದಿ ಅವರು ಇತ್ತೀಚಿಗೆ ಮೂಲ ಕಾಂಗ್ರೆಸ್ ಜೊತೆ ಹೇಗೆ ನಡೆದುಕೊಳ್ಳುತ್ತಿದ್ದಾರೆಂದು ಅವರು ಮನವರಿಕೆ ಮಾಡಿಕೊಳ್ಳಬೇಕು. ಸವದಿ ಅವರು ಪಾರ್ಟಿ ಫಂಡ್ ಬಗ್ಗೆ ಮಾತನಾಡಿದ್ದಾರೆ, ಅವರು ಸ್ಥಳೀಯ ಶಾಸಕರಾಗಿರುವುದರಿಂದಾಗಿ ಅವರಿಗೆ ಆ ಪಾರ್ಟಿ ಫಂಡ್ ಬರುತ್ತೆ, ಸುಖಸುಮ್ಮನೆ ನನ್ನ ಮೇಲೆ ಮತ್ತೊಂದು ಆರೋಪ ಮಾಡುತ್ತಿದ್ದಾರೆ. ಅವರು ನಮ್ಮ ಮನೆಗೆ ಬಂದಾಗ ಏನು ಮಾತು ನೀಡಿದ್ದಾರೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದಿದ್ದಾರೆ.
ಅಥಣಿ ಕ್ಷೇತ್ರದಲ್ಲಿ ಸಮಾಧಾನದಿಂದ ರಾಜಕಾರಣ ಮಾಡಿದರೆ ನಡೆಯುವುದಿಲ್ಲ, ಸವದಿ ಅವರ ರೀತಿಯಲ್ಲಿ ನಾವು ರಾಜಕಾರಣ ಮಾಡುತ್ತೇವೆ, ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಹಾಗೂ ನನಗೆ ಆಗಿರುವ ಅನ್ಯಾಯದ ಕುರಿತು ಕಾಂಗ್ರೆಸ್ ಹೈಕಮಾಂಡ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ದೂರು ನೀಡುತ್ತೇನೆ. ನನಗೆ ಆಗಿರುವ ಅನ್ಯಾಯದ ಕುರಿತು ನಾನು ಧ್ವನಿ ಎತ್ತಿದ್ದೇನೆ, ಸಮಸ್ತ ಮೂಲ ಕಾಂಗ್ರೆಸ್ಸಿಗರ ಧ್ವನಿಯಾಗಿ ನಾನು ಈ ಹೋರಾಟ ಪ್ರಾರಂಭಿಸಿದ್ದೇನೆ. ಜಾರಕಿಹೊಳಿ ಕುಟುಂಬದವರ ಪ್ರೇರಣೆಯಿಂದ ಈ ಹೋರಾಟ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Laxmi News 24×7