ಬೆಂಗಳೂರು: ಸ್ವಲ ಮಾತಾಡಬೇಕಾದರೆ ಹದ್ದುಬಸ್ತಿನಲ್ಲಿ ಮಾತನಾಡಿ. ನನ್ನ ಬಗ್ಗೆ ನನ್ನ ಪಕ್ಷದ ಬಗ್ಗೆ ಚರ್ಚೆ ಮಾಡುವುದಕ್ಕೆ ನೀವು ಯಾರೂ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು.
ಆರ್ಎಸ್ಎಸ್ನ ಟೀಕೆ ಮಾಡಿ ಅಧಿಕಾರಕ್ಕಾಗಿ ಬಿಜೆಪಿಗೆ ಬೆಂಬಲ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹೌದು ಟೀಕೆ ಮಾಡಿದ್ದೇನೆ. ಆರ್ಎಸ್ಎಸ್ ಅವರ ಕೆಲವು ವಿಷಯಗಳು, ಅವರ ನಡುವಳಿಕೆ ಬಗ್ಗೆ ಟೀಕೆ ಮಾಡಿದ್ದೇನೆ. ಇಲ್ಲ ಅಂತ ಹೇಳಿಲ್ಲ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ಗೆ 136 ಸೀಟು ಕೊಟ್ಟಿದ್ದು ಜನರ ಸಮಸ್ಯೆ ಕೇಳುವುದಕ್ಕೆ. ಬೇರೆ ಎಲ್ಲೂ ಬೇಡ ಕಲಬುರಗಿಯಲ್ಲಿ ಜನ ಇವತ್ತು ಬೀದಿಯಲ್ಲಿ ಇದ್ದಾರೆ. ಬೆಳೆ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಮ್ಮಿಂದ ನಾನು ಕಲಿಯಬೇಕಾ?: ಏನು ಮಾಡಿದ್ದೀರಾಪ್ಪ, ನಿಮ್ಮ ಅಪ್ಪ ಏನು ಹೇಳಿದ್ರು?. ನನ್ನ 40 ಎಕರೆ ಜಮೀನಲ್ಲಿ ಬೆಳೆ ನಷ್ಟ ಆಗಿದೆ. ನಾನು ಎಲ್ಲಿಗೆ ಹೋಗಲಿ ಅಂತ ಹೇಳಿಲ್ವ ರೈತರಿಗೆ. ನಿಮ್ಮಿಂದ ನಾನು ಕಲಿಯಬೇಕಾ?. ರಾಜಕೀಯದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಅಂತ ಹೇಳಿ. ಸ್ವಲ ಮಾತಾಡಬೇಕಾದ್ರೆ ಹದ್ದುಬಸ್ತಿನಲ್ಲಿ ಮಾತಾಡಿ. ನನ್ನ ಬಗ್ಗೆ ನನ್ನ ಪಕ್ಷದ ಬಗ್ಗೆ ಚರ್ಚೆ ಮಾಡೋಕೆ ನೀವು ಯಾರೂ ನೈತಿಕತೆ ಉಳಿಸಿಕೊಂಡಿಲ್ಲ. ನಾವು ಅಧಿಕಾರಕ್ಕೋಸರ ನಾವು ಹೋಗಲ್ಲ. ಅವರ ಅಧಿಕಾರ ಹಿಡಿಯೋಕೆ ಬೇಕಾದಾಗ ನಮ್ಮ ಹತ್ರ ಬರ್ತಾರೆ ಕಾಂಗ್ರೆಸ್ ನವರು ಎಂದು ಕಿಡಿ ಕಾರಿದರು.
ದೇವೇಗೌಡರ ರಾಜಕೀಯ ನಿರ್ನಾಮ ಮಾಡಿದ್ದೆ ಕಾಂಗ್ರೆಸ್: ಯಾವ ಯಾವ ರೀತಿ ಬೆನ್ನಿಗೆ ಚಾಕು ಹಾಕಿದ್ದಾರೆ. ಯಾರು ಯಾರನ್ನು ಅಧಿಕಾರದಿಂದ ತೆಗೆದ್ರು ದೇಶದಲ್ಲಿ?. ಚರಣ್ ಸಿಂಗ್ಗೆ ಪಾರ್ಲಿಮೆಂಟ್ ನಡೆಸೋಕೆ ಬಿಡಲಿಲ್ಲ. ಚಂದ್ರಶೇಖರ್, ಎಷ್ಟು ಜನರನ್ನು ತೆಗೆದರು?. ಅವರ ರಾಜಕೀಯ ಭವಿಷ್ಯನೇ ಹಾಳು ಮಾಡಿದ್ರಿ. ದೇವೇಗೌಡರ ರಾಜಕೀಯ ನಿರ್ನಾಮ ಮಾಡಿದ್ದೆ ಕಾಂಗ್ರೆಸ್. ಇವರಿಂದ ನಾನು ಕಲಿಯಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ, ಅಧಿಕಾರಕ್ಕಾಗಿ ಜೆಡಿಎಸ್ ಕೇಸರಿಕರಣ ಆಗಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಏನು ಆಗಿದ್ದಾರೆ. 2018ರಲ್ಲಿ ಅಧಿಕಾರಕ್ಕಾಗಿ ನಮ್ಮ ಮನೆ ಬಾಗಿಲಿಗೆ ಬಂದರು. ಬಂದು ಏನು ಮಾಡಿದ್ರು, ಸರ್ಕಾರ ನಡೆಸೋಕೆ ಬಿಟ್ರಾ?. ಮಾತು ಎತ್ತಿದ್ರೆ ವೆಸ್ಟ್ ಎಂಡ್ ನಲ್ಲಿದ್ರು ಅಂತ ಆರೋಪ ಮಾಡ್ತಾ ಇದ್ರು. ವೆಸ್ಟ್ ಎಂಡ್ನಲ್ಲಿ ನಾನು ಮಲಗಿದ್ರೆ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡೋಕೆ ಆಗ್ತಾ ಇತ್ತಾ?. ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ಒಂದು ವರ್ಷದಲ್ಲಿ ಕೊಟ್ಟೆ. ಇವತ್ತು ಸಿದ್ದರಾಮಯ್ಯ ಚರ್ಚೆ ಮಾಡ್ತಾರೆ. ರೆಕಾರ್ಡ್ ಅವರ ಹತ್ತಿನೇ ಇಲ್ವಾ ಎಂದು ಪ್ರಶ್ನಿಸಿದರು.
ಜೆಡಿಎಸ್-ಬಿಜೆಪಿ ಸಮನ್ವಯತೆ ಸಮಿತಿ ರಚನೆ: ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿದ್ದೇವೆ. ರಾಜ್ಯ ಮಟ್ಟದ್ದು, ಬೆಂಗಳೂರಿಗೆ ಸಮನ್ವಯ ಸಮತಿ ರಚನೆ ಆಗಬೇಕು. ತೀರ್ಮಾನ ಆಗಿದೆ. ನಮ್ಮ ಪಕ್ಷದಲ್ಲಿ ಸಭೆ ಆಗಿದೆ. ಕೋರ್ ಕಮಿಟಿ ರಚನೆ ಒಂದು ಸಮಿತಿ ಮಾಡೋಕೆ ತೀರ್ಮಾನ ಮಾಡಿದ್ದೇವೆ. ಮುಂದಿನ 8-10 ದಿನಗಳಲ್ಲಿ ತೀರ್ಮಾನ ಆಗುತ್ತದೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ಚರ್ಚೆ ಇಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾವುದು ಚರ್ಚೆ ಇಲ್ಲ. ರಾಜ್ಯಾಧ್ಯಕ್ಷರ ಯಾವುದೇ ಚರ್ಚೆ ಇಲ್ಲ. ಸದ್ಯಕ್ಕೆ ನಾನೇ ತಾತ್ಕಾಲಿಕ ರಾಜ್ಯಾಧ್ಯಕ್ಷ ಇದ್ದೇನೆ. ಇದರ ಅವಶ್ಯಕತೆ ಇಲ್ಲ ಅಂತ ಒಂದು ವಿಂಗ್ ಇದೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ ಜವಾಬ್ದಾರಿ ಕೊಟ್ರೆ. ಓಡಾಟ ಮಾಡಿ ಸಂಘಟನೆ ಮಾಡ್ತಾರೆ ಅಂತಾರೆ. ಅದರೆ ಇದರ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ತಿಳಿಸಿದರು.
ಪವರ್ ಶೇರಿಂಗ್ ಬಗ್ಗೆ ಕಾಂಗ್ರೆಸ್ನಲ್ಲಿ ಚರ್ಚೆ, ಯತೀಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನನಗೆ ಅವರ ಪಕ್ಷದ ಬೆಳವಣಿಗಳ ಬಗ್ಗೆ ನಾವು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿ ಏನು ತೀರ್ಮಾನ ಮಾಡ್ತಾರೋ ಮಾಡಲಿ ಎಂದರು.
ಅಭಿವೃದ್ಧಿ, ಗುಂಡಿ ಮುಚ್ಚೋಕೆ ನಿರ್ಲಕ್ಷ್ಯ, ಕೇಂದ್ರ ಸರ್ಕಾರದ ಮೇಲೆ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಮಾತನಾಡಿ, ಬಿಜೆಪಿ ಮತ್ತು ನಮ್ಮ ಪಕ್ಷದ ಸಂಸತ್ತಿನ ಸದಸ್ಯರು ಇದ್ದೇವೆ, ಮಂತ್ರಿಗಳು ಇದ್ದೇವೆ. ಈಗ ಸಂಸತ್ ಸದಸ್ಯರು ಮಾತಾಡಲ್ಲ. ಧೈರ್ಯ ಇಲ್ಲ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೇಳುತ್ತೇನೆ. ದೇಶದಲ್ಲಿ ಸುಮಾರು 50 ವರ್ಷ 1983 ವರೆಗೆ ರಾಜ್ಯದ 28ಕ್ಕೆ 18 ಕ್ಷೇತ್ರಗಳು ಕಾಂಗ್ರೆಸ್ನಿಂದಲೇ ಆಯ್ಕೆ ಆಗ್ತಾ ಇತ್ತು. ಅದರ ಜೊತೆಗೆ ಕೇಂದ್ರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳ ಇದ್ವು. ಅವತ್ತಿನ ಆ ಸಂಸತ್ತಿನ ಸದಸ್ಯರು ಏನು ತಂದ್ರು. ಅವರದ್ದೇ ಸರ್ಕಾರ, ಸಂಸತ್ ಸದಸ್ಯರು ಇದ್ರು ಏನು ತಂದ್ರು?. ಯಾವ ನೀರಾವರಿ ಯೋಜನೆ ತಂದ್ರು?. ಯಾವ ಯೋಜನೆ ಹಣ ತಂದ್ರು. ನಮ್ಮ ಬಗ್ಗೆ ಚರ್ಚೆ ಮಾಡೋ ಬದಲು ಅವರ ಪಕ್ಷದ ಬಗ್ಗೆ ಕೂತ ಚರ್ಚೆ ಮಾಡಲಿ ಎಂದು ಟೀಕಿಸಿದರು.