ಬೆಳಗಾವಿ: ಬೆಳಗಾವಿಯಲ್ಲಿರುವ ಅನಧಿಕೃತ ಚರ್ಮ ರೋಗ ಚಿಕಿತ್ಸಾ ಕೇಂದ್ರಗಳ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿ, 10 ಕೇಂದ್ರಗಳನ್ನು ಸೀಜ್ ಮಾಡಿದ್ದಾರೆ. 7 ಕೇಂದ್ರಗಳಿಗೆ ನೋಟಿಸ್ ನೀಡಲಾಗಿದೆ. ಅದೇ ರೀತಿ 7 ಕೇಂದ್ರಗಳು ಬಾಗಿಲು ತೆರೆದಿರಲಿಲ್ಲ. 6 ಕೇಂದ್ರಗಳಲ್ಲಿ ಯಾವುದೇ ನ್ಯೂನತೆಗಳು ಕಂಡುಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಬೆಳಗಾವಿಯಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಡರ್ಮಾಟಾಲಾಜಿಕಲ್ ಚಿಕಿತ್ಸೆ ನೀಡುತ್ತೇವೆ ಅಂತಾ ಬೋರ್ಡ್ ಹಾಕಿಕೊಂಡು ಪ್ಲಾಸ್ಮಾ ಥೆರಪಿ, ಹೇರ್ ಪ್ಲಾಂಟ್ ಸರ್ಜರಿ ಮತ್ತು ಲೇಸರ್ ಚಿಕಿತ್ಸೆ ಸೇರಿ ಮತ್ತಿತರ ಸರ್ಜರಿ ಮಾಡುತ್ತಿರುವ ಬಗ್ಗೆ ಡರ್ಮಾಟಾಲಾಜಿಕಲ್ ಅಸೊಸಿಯೇಷನ್, ಬೆಳಗಾವಿ ಚಾಪ್ಟರ್ ಸೇರಿದಂತೆ ಹಲವು ವೈದ್ಯರಿಂದ ಈ ಸಂಬಂಧ ದೂರು ಕೇಳಿ ಬಂದಿದ್ದವು. ಹಾಗಾಗಿ, ಸುಮಾರು 30 ಕಡೆಗಳಲ್ಲಿ ಕೆಪಿಎಂಇ ಕಾನೂನಿನ ಅಡಿಯಲ್ಲಿ ದಾಳಿ ಮಾಡಲಾಗಿದೆ” ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
“ನನ್ನ ಆದೇಶದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು 30 ಸ್ಥಳಗಳಲ್ಲಿ 30 ತಂಡಗಳು ದಾಳಿ ಮಾಡಿ ಪರಿಶೀಲನೆ ಮಾಡಿವೆ. ಇಲ್ಲಿ ಏನೇನು ಸಾಕ್ಷ್ಯಗಳು ಸಿಗುತ್ತವೆ ಎಂಬ ಬಗ್ಗೆ ಒಂದು ಪ್ರಾಥಮಿಕ ವರದಿ ತರಿಸಿಕೊಂಡು, ಅವುಗಳ ಬಗ್ಗೆ ನನ್ನ ಅಧ್ಯಕ್ಷತೆಯ ಕೆಪಿಎಂಇ ಕೋರ್ಟ್ನಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಡಿಸಿ ತಿಳಿಸಿದರು.