ಕಲಬುರಗಿ: ಕಲ್ಯಾಣ ನಾಡಿನ ಪ್ರಸಿದ್ಧ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪಾ (91) ಅವರು ಇಂದು ಲಿಂಗೈಕ್ಯರಾದರು. ವಯೋಸಹಜ ಕಾಯಿಲೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಇವರು ದಾಸೋಹ ಮಹಾ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಮತ್ತಷ್ಟು ಕ್ಷೀಣಿಸಿದ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಆಂಬ್ಯುಲೆನ್ಸ್ ಮೂಲಕ ದಾಸೋಹ ಮಹಾಮನೆಗೆ ಕರೆತರಲಾಗಿತ್ತು. ಬಳಿಕ ಆಂಬ್ಯುಲೆನ್ಸ್ ನಲ್ಲೇ ಶರಣಬಸವೇಶ್ವರ ದೇವಸ್ಥಾನಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಶರಣಬಸವೇಶ್ವರ ಗರ್ಭಗುಡಿಯಲ್ಲಿ ತೀರ್ಥ ನೀಡಲಾಗಿದೆ. ಆ ನಂತರ ದಾಸೋಹ ಮಹಾಮನೆಗೆ ಕರೆದುಕೊಂಡು ಹೋಗಿದ್ದು, ಮಹಾಮನೆಯಲ್ಲಿ ಅಪ್ಪಾ ಅವರು ಇಹಲೋಕ ತ್ಯಜಿಸಿದರು ಎಂದು ತಿಳಿದು ಬಂದಿದೆ.
ಕಲ್ಯಾಣ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯ ಹರಿಕಾರ: ಡಾ.ಶರಣಬಸವಪ್ಪ ಅಪ್ಪಾ ಅವರು ಕಲ್ಯಾಣ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದವರು. ಖಾಸಗಿ ಶರಣಬಸವ ವಿಶ್ವವಿದ್ಯಾಲಯ ಸ್ಥಾಪಿಸಿ ಎಂಬಿಎ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಮಟ್ಟದ ಶಿಕ್ಷಣದ ವ್ಯವಸ್ಥೆ ಕಲ್ಪಿಸಿದ್ದರು. ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಇವರು ಅಪಾರ ಸಂಖ್ಯೆಯ ಭಕ್ತರನ್ನು ಅಗಲಿದ್ದಾರೆ.
ನಾಳೆ ಅಂತ್ಯಸಂಸ್ಕಾರ: ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ವೀರಶೈವ ವಿಧಿವಿಧಾನದಂತೆ ಅಂತಿಮ ಕಾರ್ಯಗಳು ನಡೆಯಲಿವೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.