ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜತೆಗೆ, ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಆಕರ್ಷಣೀಯವಾಗಿಸಲು ಆಸಕ್ತಿ ವಹಿಸಿ, ಕೆಲಸ ಮಾಡಿ ಎಂದು ಅಧಿಕಾರಿಗಳು ಹಾಗೂ ದೀಪಾಲಂಕಾರ ಮಾಡುವ ವಿದ್ಯುತ್ ಗುತ್ತಿಗೆದಾರರಿಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಕೆ. ಎಂ. ಮುನಿಗೋಪಾಲ್ ರಾಜು ಅವರು ಸಲಹೆ ನೀಡಿದ್ದಾರೆ.
ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾಡಲಾಗುವ ವಿದ್ಯುತ್ ದೀಪಾಲಂಕಾರ ಎಲ್ಲರ ಗಮನ ಸೆಳೆಯಲಿದೆ. ಹೀಗಾಗಿ ಈ ಬಾರಿಯ ವಿದ್ಯುತ್ ದೀಪಾಲಂಕಾರವನ್ನು ಕಳೆದ ವರ್ಷಕ್ಕಿಂತ ಹೆಚ್ಚು ಆಕರ್ಷಕವಾಗಿ ಮಾಡಲು ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಿಗಮದ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದಿದ್ದಾರೆ.

ದಸರಾ ದೀಪಾಲಂಕಾರ ವಿಶ್ವಮಟ್ಟದಲ್ಲಿ ಆಕರ್ಷಣೀಯಗೊಳಿಸಲು ಸೆಸ್ಕ್ ಜತೆಗೆ ವಿದ್ಯುತ್ ಗುತ್ತಿಗೆದಾರರು ಪ್ರಮುಖ ಕಾರಣರಾಗಿದ್ದಾರೆ. ಪ್ರತಿವರ್ಷದ ರೀತಿಯಲ್ಲಿ ಈ ಬಾರಿಯೂ ಸಹ ವಿದ್ಯುತ್ ದೀಪಾಲಂಕಾರದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ದಸರಾ ಆರಂಭದಲ್ಲಿ ಹಾಗೂ ದಸರಾ ಮುಗಿದ ಬಳಿಕವೂ ಎಲ್ಲರನ್ನೂ ಆಕರ್ಷಿಸುವ ದೀಪಾಲಂಕಾರವನ್ನು ಹೊಸತನದ ಜತೆಗೆ ಹೆಚ್ಚು ಆಕರ್ಷಕವಾಗಿ ಮಾಡುವ ಬಗ್ಗೆ ಈಗಿನಿಂದಲೇ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ದೀಪಾಲಂಕಾರ ಹೆಚ್ಚಿನ ಆಕರ್ಷಣೀಯವಾಗಿ ಮಾಡುವುದು ಮಾತ್ರವಲ್ಲದೇ, ಆರ್ಥಿಕವಾಗಿ ಹೊರೆಯಾಗದ ರೀತಿಯಲ್ಲಿ ದೀಪಾಲಂಕಾರ ಮಾಡುವುದು ಮುಖ್ಯ’ ಎಂದು ಸಲಹೆ ನೀಡಿದ್ದಾರೆ.
ಸುರಕ್ಷತೆಗೆ ಆದ್ಯತೆ ನೀಡಿ : ‘ದಸರಾ ದೀಪಾಲಂಕಾರದ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಆಗಮಿಸುತ್ತಾರೆ. ಆದ್ದರಿಂದ ದೀಪಾಲಂಕಾರದ ಅಂದವನ್ನು ಹೆಚ್ಚಿಸುವುದರ ಜತೆಗೆ ಸುರಕ್ಷತೆಗೂ ಆದ್ಯತೆ ನೀಡುವುದು ಮುಖ್ಯವಾಗಿದೆ. ದಸರಾ ವೇಳೆಯಲ್ಲಿ ಮಳೆಯಾಗುವ ಸಂಭವ ಹೆಚ್ಚಾಗಿರಲಿದೆ. ಆದ್ದರಿಂದ ಮಳೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ತೊಂದರೆಗಳು ಉಂಟಾಗದಂತೆ ಎಚ್ಚರವಹಿಸಿ, ದೀಪಾಲಂಕಾರ ಮಾಡುವಲ್ಲಿ ಹೆಚ್ಚಿನ ಗಮನವಹಿಸಬೇಕು’ ಎಂದು ವಿದ್ಯುತ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ರೂಪುರೇಷೆಗಳು ಸಿದ್ಧ: ‘ದಸರಾ ಜಂಬೂಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಈ ಬಾರಿ ಆಕರ್ಷಕ ರೀತಿಯಲ್ಲಿ ದೀಪಾಲಂಕಾರ ಮಾಡಲು ಚಿಂತನೆ ನಡೆಸಲಾಗಿದೆ. ಜತೆಗೆ ನಗರದಲ್ಲಿರುವ ವೃತ್ತಗಳಲ್ಲಿ ವಿನೂತನ ರೀತಿಯಲ್ಲಿ ದೀಪಾಲಂಕಾರ ಮಾಡಬೇಕೆಂದು ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯವಿರುವ ರೂಪುರೇಷೆಗಳು, ಕೆಲವೊಂದು ಡಿಸೈನ್‌ಗಳನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ’ ಎಂದಿದ್ದಾರೆ.