ಹುಬ್ಬಳ್ಳಿ: ಮಹದಾಯಿ ಯೋಜನೆಗೆ ಪರಿಸರ ಇಲಾಖೆಯಿಂದ ಅನುಮತಿ ದೊರಕಿಸಿ ಕೊಡುವಂತೆ ಆಗ್ರಹಿಸಿ ನಗರದ ಚಿಟಗುಪ್ಪಿ ಆಸ್ಪತ್ರೆಯ ಸಮೀಪದಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಚೇರಿ ಎದುರು ನಡೆಸುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರೈತ ಮುಖಂಡರು ಹಾಗೂ ಪ್ರಹ್ಲಾದ್ ಜೋಶಿ ನಡುವೆ ಕಳೆದ ರಾತ್ರಿ ನಡೆದ ಮಾತುಕತೆಯ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಕೊನೆಗೊಳಿಸಲು ಹೋರಾಟಗಾರರು ನಿರ್ಧರಿಸಿದರು.
ಮಹದಾಯಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ ಪ್ರತಿಕ್ರಿಯಿಸಿ, ”ಹೋರಾಟಕ್ಕೂ ಮುನ್ನ ಸಚಿವರು ಭೇಟಿಯಾಗಲು ಹೇಳಿದ್ದರು. ಆಗ ನಾವು, ಪರಿಸರ ಇಲಾಖೆ ಅನುಮತಿ ಕೊಡಿಸುವವರೆಗೂ ಹೋರಾಟ ಮಾಡುತ್ತೇವೆ ಎಂದಿದ್ದೆವು. ರಾಜ್ಯ ಸರ್ಕಾರದ ಅಧಿಕಾರಿಗಳ, ವಕೀಲರ ಸಭೆ ಇದೆ. ನೀವೂ ಬನ್ನಿ, ಭೇಟಿ ಮಾಡಿಸುವುದಾಗಿ ಜೋಶಿ ಅವರು ಹೇಳಿದ್ದರು. ನಾವು ಬರುವುದಿಲ್ಲ ಎಂದು ಹೇಳಿದ್ದೇವೆ. ನೀವು(ಪ್ರಹ್ಲಾದ್ ಜೋಶಿ) ಜಿಲ್ಲೆಯ ಪ್ರತಿನಿಧಿಯಾಗಿದ್ದು ಪರಿಸರ ಇಲಾಖೆಯಿಂದ ಅನುಮತಿ ತರಬೇಕು ಎಂದು ಒತ್ತಾಯಿಸಿದ್ದೇವೆ. ಜೋಶಿಯವರೇ ತಮ್ಮ ನೇತೃತ್ವದಲ್ಲಿ ಅನುಮತಿ ತಂದುಕೊಡಬೇಕು. 15 ದಿನಗಳ ಕಾಲಾವಕಾಶ ಕೇಳಿದ್ದಾರೆ. ಅನುಮತಿ ಪತ್ರ ತಂದರೆ ಸರಿ, ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ” ಎಂದರು.
ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತಿದೆ. ಸಚಿವ ಜೋಶಿ ಅವರು ಕೊಟ್ಟ ಮಾತಿನಂತೆ ನಡೆಯಬೇಕು. ಕಾಲಮಿತಿಯಲ್ಲಿ ಯೋಜನೆ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮತ್ತೆ ಹೋರಾಟ ಆರಂಭಿಸುವ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ.