ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ನಿಂದ ಸಣ್ಣ ವ್ಯಾಪಾರಸ್ಥರಿಗೆ ಆಘಾತ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆಯವರು ನೋಟಿಸ್ ಕೊಟ್ಟಿದ್ದು, ಸಣ್ಣ ವ್ಯಾಪಾರಸ್ಥರಿಗೆ ದೊಡ್ಡ ಆಘಾತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಕೇಂದ್ರದ ಮೇಲೆ ಹಾಕಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಜಿಎಸ್ಟಿ ಕೌನ್ಸಿಲ್ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಂಟಿ ಜವಾಬ್ದಾರಿ ಇದೆ. ರಾಜ್ಯದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೊಣೆ ಮತ್ತು ನಿರ್ವಹಣೆಯನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯವರು ನೋಡುತ್ತಾರೆ. ಈಗ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿರುವುದರಿಂದ ಅವರ ವ್ಯಾಪಾರ ಬಂದ್ ಆಗಿ ದೊಡ್ಡ ಹೊಡೆತ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಣ್ಣ ವ್ಯಾಪಾರಸ್ಥ ಮುಖಂಡರನ್ನು ಕರೆದು ಮಾತನಾಡಬೇಕು. ಸಿಎಂ ಹಣಕಾಸು ಸಚಿವರಾಗಿದ್ದು, ಇದನ್ನು ಬಗೆಹರಿಸಬೇಕು. ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರು ಕಾನೂನು ಬದ್ದವಾಗಿ ತೆರಿಗೆ ಕಟ್ಟಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಮಹತ್ವ ಕಳೆದುಕೊಳ್ಳಬಾರದು: ಬೆಂಗಳೂರು ಐದು ಮಹಾನಗರ ಪಾಲಿಕೆಯಾಗಿ ವಿಭಜನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ವಿಭಜನೆ ಮಾಡುವುದರಿಂದ ಅದರ ಮಹತ್ವ ಕಡಿಮೆ ಆಗಬಾರದು. ದೇಶದ ನಾಲ್ಕು ಮಹಾನಗರಕ್ಕಿಂತ ಪ್ರಖ್ಯಾತಿ ಇರುವ ನಗರ ಅಂದರೆ ಬೆಂಗಳೂರು. ವಿದೇಶದಲ್ಲಿಯೂ ಇದರ ಮಹತ್ವ ಇದೆ. ವಿಭಜನೆಯಿಂದ ಅಭಿವೃದ್ಧಿಯಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ಕೇವಲ ರಾಜಕೀಯ ಉದ್ದೇಶದಿಂದ ಪ್ರತ್ಯೇಕ ಪಾಲಿಕೆ ಮಾಡುವುದು ಸರಿಯಲ್ಲ. ಈಗಾಗಲೇ ಬಿಬಿಎಂಪಿಗೆ 110 ಹಳ್ಳಿಗಳನ್ನು ಸೇರಿಸಲಾಗಿತ್ತು. ಅವು ಇನ್ನೂ ಅಭಿವೃದ್ಧಿ ಆಗಿಲ್ಲ. ಈಗ ಅವೆಲ್ಲ ಒಂದೇ ಪಾಲಿಕೆಗೆ ಸೇರಿದರೆ ಅವು ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದರು.