ಬೆಂಗಳೂರು : ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಆರೋಪಿಯಿಂದ 1.25 ಲಕ್ಷ ಸ್ವೀಕರಿಸುತ್ತಿದ್ದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗೋವಿಂದಪುರ ಠಾಣೆಯ ಪಿಎಸ್ಐ ಸಾವಿತ್ರಿ ಬಾಯಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಮೊಹಮ್ಮದ್ ಯೂನಸ್ ಎಂಬಾತನಿಂದ 1.25 ಲಕ್ಷ ರೂ. ಸ್ವೀಕರಿಸುತ್ತಿದ್ದಾಗಲೇ ಸಾವಿತ್ರಿ ಬಾಯಿ ಅವರನ್ನ ವಶಕ್ಕೆ ಪಡೆಯಲಾಗಿದೆ.
ಪ್ರಕರಣವೇನು?: ವಿವಾಹವಾಗಿರುವುದನ್ನು ಮುಚ್ಚಿಟ್ಟು ಲೀವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಮೊಹಮ್ಮದ್ ಯೂನಸ್ನನ್ನು ಪ್ರಶ್ನಿಸಿದಾಗ ತನ್ನ ಮೇಲೆ ಹಲ್ಲೆಗೈದಿರುವುದಾಗಿ ಯುವತಿಯೊಬ್ಬರು ಗೋವಿಂದಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನ ವಹಿಸಿಕೊಂಡಿದ್ದ ಸಾವಿತ್ರಿ ಬಾಯಿ ಅವರು ಬಿ ರಿಪೋರ್ಟ್ ಸಲ್ಲಿಸಲು 1.25 ಲಕ್ಷ ರೂ. ನೀಡುವಂತೆ ಮೊಹಮ್ಮದ್ ಯೂನಸ್ ಬಳಿ ಬೇಡಿಕೆಯಿಟ್ಟಿದ್ದರು. ಮಹಮ್ಮದ್ ಯೂನಸ್ ನೀಡಿದ್ದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರುವ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು. ಅದರಂತೆ ಸೋಮವಾರ 1.25 ಲಕ್ಷ ರೂಪಾಯಿಯನ್ನು ಸ್ವೀಕರಿಸುತ್ತಿದ್ದಾಗಲೇ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಾವಿತ್ರಿ ಬಾಯಿ ಅವರನ್ನ ವಶಕ್ಕೆ ಪಡೆಯಲಾಗಿದೆ.