ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ ನೀಡಿರುವ ದೂರಿನನ್ವಯ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಡಿವೈಎಸ್‌ಪಿ ಹಾಗೂ ಮತ್ತೋರ್ವ ಮಹಿಳೆಯ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಬೆಂಗಳೂರು ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ( ಅಪರಾಧ ಸಂಖ್ಯೆ 0033/2025). ತನಿಖೆ ಕೂಡ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನಲ್ಲಿ ಏನಿದೆ?: ದೂರುದಾರ ಮಹಿಳೆ ಹಾಗೂ ಶಂಕರಪ್ಪ ಅವರಿಗೆ 2003ರಲ್ಲಿ ವಿವಾಹವಾಗಿತ್ತು. ಆ ಸಂದರ್ಭದಲ್ಲಿ ಶಿಕ್ಷಕರಾಗಿದ್ದ ಅವರು ವರದಕ್ಷಿಣೆ ರೂಪದಲ್ಲಿ ಚಿನ್ನಾಭರಣ, ದ್ವಿಚಕ್ರ ವಾಹನ ಹಾಗೂ ಗೃಹೋಪಯೋಗಿ ವಸ್ತುಗಳನ್ನ ಪಡೆದಿದ್ದರು. ನಂತರ ಶಂಕರಪ್ಪ ಅವರು ಶಿಕ್ಷಕ ವೃತ್ತಿ ತೊರೆದು ಪೊಲೀಸ್ ಇಲಾಖೆಗೆ ಸೇರಿದ್ದರು. ಬಳಿಕ ತನ್ನ ಅಂತಸ್ತಿಗೆ ತಕ್ಕಂತೆ ವರದಕ್ಷಿಣೆ ನೀಡಬೇಕು ಎಂದು ಕಿರುಕುಳ ನೀಡಲಾರಂಭಿಸಿದ್ದರು. ಇದೇ ವಿಚಾರವಾಗಿ ಹಲವು ಬಾರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ದೂರುದಾರ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ಜನವರಿಯಲ್ಲಿ ತಾನು ಮದುವೆಯಾಗಿರುವುದಾಗಿ ತಿಳಿಸಿದ್ದರು. ಅವರೊಂದಿಗೂ ತಾನು ಮಾತನಾಡಿದ್ದೆ. ಆಕೆ ಸಹ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ನೊಂದ ಮಹಿಳೆ ತನ್ನ ದೂರಿನಲ್ಲಿ ಮನವಿ ಮಾಡಿದ್ದಾರೆ.