ಕೊಪ್ಪಳ : ಜಿಲ್ಲೆಯಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಸಾವಿರ ಎಕರೆ ಜಮೀನು ಮೀಸಲಿರಿಸಿ ಖಾಸಗಿ ಕಂಪನಿ ಸ್ಥಾಪನೆಗೆ ಮುಂದಾಗಿರುವುದಕ್ಕೆ ಕೊಪ್ಪಳದ ಜನತೆ, ಗವಿಮಠದ ಗವಿಶ್ರೀಗಳು ವಿರೋಧಿಸಿದ್ದಾರೆ. ಅದಕ್ಕೆ ನಮ್ಮದು ವಿರೋಧವಿದೆ. ಈ ಕುರಿತು ಮಾ.4 ರಂದು ಸಿಎಂ ಜೊತೆ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸುವುದಾಗಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ. ಆದರೆ ಅವರು ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆ. ತಂಗಡಗಿ ಒಳ್ಳೆಯ ಕೆಲಸ ಮಾಡುತ್ತಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಕೊಪ್ಪಳ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಕನಕಗಿರಿ, ಆನೆಗೊಂದಿ ಉತ್ಸವ ಮಾಡುವುದು ನನ್ನ ಕರ್ತವ್ಯ, ಅದನ್ನ ನಾನು ಮಾಡುತ್ತೇನೆ ಎಂದರು.
ನಾನು ಆನೆಗೊಂದಿ ಉತ್ಸವ ಮಾಡೋದಿಲ್ಲ ಎಂದಿಲ್ಲ. ಆನೆಗೊಂದಿ ಉತ್ಸವಕ್ಕೆ ನಮ್ಮ ಸರ್ಕಾರ 4.46 ಕೋಟಿ ರೂಪಾಯಿ ಅನುದಾನ ನೀಡುತ್ತದೆ. ಉತ್ಸವಗಳಿಗೆ ಹಣ ನೀಡಿಲ್ಲ ಎಂದು ಆರೋಪಿಸುವ ಶಾಸಕ ಜನಾರ್ದನರೆಡ್ಡಿ ಬೇಕಿದ್ದರೆ ಕನಕಗಿರಿ ಉತ್ಸವದಲ್ಲಿ ಪ್ರತಿಭಟನೆ ಮಾಡಲಿ. ಅದಕ್ಕೆ ಜನರು ಉತ್ತರ ನೀಡುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಲಾವಿದರಿಗೆ ನೀಡಬೇಕಾಗಿರುವ ಬಾಕಿ ಹಣವನ್ನ ಈ ಹಿಂದಿನ ಸರ್ಕಾರದಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ. ನಾನು ಇಲಾಖೆಯಿಂದ ಬಾಕಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ : ಗ್ಯಾರಂಟಿ ಯೋಜನೆ ಬೇಡ ಎಂದು ಬಿಜೆಪಿಯವರು ಸದನದಲ್ಲಿ ಹೇಳಲಿ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಅವರು ಕಾರ್ಪೋರೇಟ್ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಎಸ್ಸಿಪಿ/ ಟಿಎಸ್ಪಿಯವರಿಗೆ ಬಿಜೆಪಿಯವರು ಎಷ್ಟು ಅನುದಾನ ನೀಡಿದ್ದಾರೆ ಹೇಳಲಿ. ಅವರ ಅವಧಿಯಲ್ಲಿ ಎರಡು ಕೈ ಸಾಲದಕ್ಕೆ ನಾಲ್ಕು ಕೈಯಿಂದ ತಿಂದಿದ್ದಾರೆ. ಅದರಿಂದ ಈಗ ಅವರು 62 ಸ್ಥಾನಗಳನ್ನು ಪಡೆದಿದ್ದಾರೆ. ಇಂದು ಗೃಹಲಕ್ಷ್ಮಿ ಒಂದು ಕಂತು ಹಾಕಿದ್ದೇವೆ. ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆ ಹಣ ನೀಡುತ್ತೇವೆ. ಯಾವುದೇ ಕಾರಣಕ್ಕೂ ಐದು ಗ್ಯಾರಂಟಿಯನ್ನು ಬಂದ್ ಮಾಡೋದಿಲ್ಲ ಎಂದರು.