ಕಾಮಗಾರಿಯೇ ಮುಗಿದಿಲ್ಲ!ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ಮತ್ತೊಂದು ಟೋಲ್
Laxminews 24x7
ಡಿಸೆಂಬರ್ 14, 2024
ರಾಜಕೀಯ, ರಾಜ್ಯ
63 Views
ಹಾಸನದಿಂದ ಮಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ 700 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ಆದರೂ,
ಆಲೂರು ತಾಲ್ಲೂಕಿನಲ್ಲಿ ಹೊಸ ಟೋಲ್ ಪ್ಲಾಜಾ ಆರಂಭಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಇದರಿಂದ ಜನರ ಆಕ್ರೋಶ ಹೆಚ್ಚಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತವಾಗಿದೆ. ಸ್ಥಳೀಯರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ರಸ್ತೆ ಬರೊಬ್ಬರಿ ಎರಡು ದಶಕಗಳಿಂದಲೂ ಅವ್ಯವಸ್ಥೆಯ ಆಗರವಾಗಿದೆ. ಈ ವರ್ಷ ಮಳೆಗಾಲದಲ್ಲಿ ಹಲವು ಕಡೆ ಭೂ ಕುಸಿತವಾಗಿ ಸ್ವತಃ ಸಿಎಂ ಸಿದ್ದರಾಮಯ್ಯ ಕೂಡ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದರು.
ಹಾಸನದಿಂದ ಮಾರನಹಳ್ಳಿವರೆಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆ ಕಾಮಗಾರಿ ಆರಂಭಗೊಂಡು 8 ವರ್ಷಗಳೇ ಕಳೆದಿವೆ. ಬರೊಬ್ಬರಿ 700 ಕೋಟಿ ರೂ. ವೆಚ್ಚದ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಕಾಮಗಾರಿ ಮುಗಿಯುವ ಮುನ್ನವೇ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿ ನಡೆಸಿದ್ದು, ಜನರ ಆಕ್ರೊಶಕ್ಕೆ ಕಾರಣವಾಗಿದೆ. ಟೋಲ್ ಸಂಗ್ರಹಕ್ಕೆ ಮುಂದಾದರೆ ಹೋರಾಟ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡದ್ದಾರೆ.