ಬೆಂಗಳೂರು: ರಾಜ್ಯದಲ್ಲಿರುವ ಕೆಲವು ಬಿಪಿಎಲ್ ಕಾರ್ಡ್‌ದಾರರಿಗೆ ಈಗ ಸದ್ದಿಲ್ಲದೆ ಸರಕಾರ “ಎಪಿಎಲ್ ಆಘಾತ’ ನೀಡುತ್ತಿದೆ! ಆದಾಯ ತೆರಿಗೆ ಪಾವತಿ ಸಹಿತ ಹಲವು ಮಾನದಂಡಗಳಡಿ ಕಾರ್ಯಾಚರಣೆ ನಡೆಸಿದ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಈ ಹಿಂದೆಯೇ ಸುಮಾರು 12 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಿದೆ.
ಆ ಪೈಕಿ ಕೆಲವರನ್ನು ಎಪಿಎಲ್ ಕಾರ್ಡ್‌ದಾರರಾಗಿ ಪರಿವರ್ತಿಸುವ ಕೆಲಸ ನಡೆದಿದೆ. ಅವರೆಲ್ಲ ಎಂದಿನಂತೆ ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಮೇಲೆ ಬೆರಳಿಟ್ಟಾಗ “ಎಪಿಎಲ್’ ಕಾವು ತಗಲುತ್ತಿದೆ.
ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವುದು ತಪಾಸಣೆಯಿಂದ ಗೊತ್ತಾದಾಗ ಅಂತಹ ಗ್ರಾಹಕರಿಗೆ ನೋಟಿಸ್ ನೀಡಲಾಗುತ್ತದೆ. ಅನಂತರ ಅಮಾನತಿನಲ್ಲಿ ಇಡಲಾಗುತ್ತದೆ. ಆದರೆ ಈ ಬಾರಿ ಅಂತಹ ಕಸರತ್ತಿನ ಬದಲು ನೇರವಾಗಿ ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್‌ದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ಎರಡು- ಮೂರು ಸಾವಿರ ಗ್ರಾಹಕರನ್ನು ಹೀಗೆ ವರ್ಗಾಯಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.