ಕಾಗವಾಡ: ರಾಜ್ಯ ಸರ್ಕಾರ ಕಬ್ಬಿನ ಕಾರ್ಖಾನೆಗಳನ್ನು ನ.8ರ ನಂತರ ಪ್ರಾರಂಭಿಸಲು ಆದೇಶ ನೀಡಿದ್ದು, ತಾಲ್ಲೂಕಿನ ಕೆಲ ಕಾರ್ಖಾನೆಗಳು ಈಗಾಗಲೇ ಪ್ರಾರಂಭಗೊಂಡಿವೆ. ಕಬ್ಬಿನ ದರ ಘೋಷಣೆ ಮಾಡದೇ ಕಾರ್ಖಾನೆಗಳು ಪ್ರಾರಂಭಿಸಿಸಬಾರದೆಂದು ಆಗ್ರಹಿಸಿ ತಾಲ್ಲೂಕಿನ ಕಬ್ಬು ಬೆಳೆಗಾರ ರೈತರು ಮಂಗಳವಾರ ತಹಶೀಲ್ದಾರ್ ರಾಜೇಶ ಬುರ್ಲಿ ಮತ್ತು ಕಾಗವಾಡ ಪಿಎಸ್‌ಐ ಜಿ.ಜಿ ಬಿರಾದರ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಸುರೇಶ ಚೌಗುಲೆ ಮಾತನಾಡಿ, ಈ ಮೊದಲು ರಾಜ್ಯ ಸರ್ಕಾರ ನ.15 ರ ನಂತರ ಕಾರ್ಖಾನೆಗಳನ್ನು ಪ್ರಾರಂಭಿಸಲು ಸೂಚಿಸಿತ್ತು. ಆದರೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ರೈತರ ಮತ್ತು ಕಾರ್ಖಾನೆ ಮಾಲೀಕರ ಸಭೆಯಲ್ಲಿ ನ. 8ರ ನಂತರ ಕಾರ್ಖಾನೆಗಳನ್ನು ಪ್ರಾರಂಭಿಸಲು ಸೂಚಿಸಿದೆ. ಆದರೂ ಕಾರ್ಖಾನೆಗಳು ಆದೇಶ ಉಲ್ಲಂಘಿಸಿ ಕಬ್ಬು ಕಟಾವು ಪ್ರಾರಂಭಿಸಿವೆ. ತರಾತುರಿಯಲ್ಲಿ ಕಬ್ಬಿನ ದರ ನಿಗದಿ ಮಾಡದೇ ಕಾರ್ಖಾನೆ ಪ್ರಾರಂಭಿಸಿರುವುದು ಸರಿಯಲ್ಲ’ ಎಂದರು.